ಮುಂಗಾರು ಆರಂಭವಾಗಿದ್ದು, ಡೆಂಗ್ ಬಗ್ಗೆ ಜಾಗೃತರಾಗಿರಿ: ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

ಮೈಸೂರು,ಜೂ.9: ಮುಂಗಾರು ಆರಂಭವಾಗಿದ್ದು ಈ ಕಾಲದಲ್ಲಿ ಕಾಡುವ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾದ ಡೆಂಗ್ ಬಗ್ಗೆ ಜಾಗೃತರಾಗಿ, ಸೊಳ್ಳೆ ನಿಯಂತ್ರಣಕ್ಕೆ ಕ್ರಮವಹಿಸಿ. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ, ಸೊಳ್ಳೆಗಳ ಸಂತತಿ ನಿಯಂತ್ರಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಗ್ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ 2018ರ ಜನವರಿಯಿಂದ ಇಲ್ಲಿಯವರೆಗೆ 13 ಡೆಂಗ್ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಕೇವಲ ಎರಡು ಮಾತ್ರ ದೃಢಪಟ್ಟಿವೆ. ಸಾಮಾನ್ಯ ಜ್ವರ ಬಂದರು ಡೆಂಗ್ ಎಂಬ ಬಗ್ಗೆ ತಪ್ಪು ತಿಳುವಳಿಕೆ ಬೇಡ, ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವುದರಿಂದ ಡೆಂಗ್ಅನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರ, ಆಶಾ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳ ಮನೆ ಮನೆಗೆ ತೆರಳಿ ಅರಿವು ಮೂಡಿಸಿದ್ದು, ಇಲಾಖೆಯಿಂದ ಭಿತ್ತಿ ಪತ್ರ ಹೊರಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ನಾಗರಿಕರು ಸಹಕರಿಸಬೇಕೆಂದು ಕೋರಿದರು.
ರಾಜ್ಯದಲ್ಲಿ ಇದುವರೆಗೂ ನಿಫಾಹ್ ಪ್ರಕರಣ ವರದಿಯಾಗಿಲ್ಲ. ಆ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವುದು ಕೇವಲ ವದಂತಿಯಾಗಿದ್ದು ಭಯ ಭೀತರಾಗಬೇಡಿ. ಕೇರಳ ರಾಜ್ಯದಲ್ಲಿ ಹೆಚ್ಚಾಗಿದ್ದು, ಅಲ್ಲಿಂದ ಆಗಮಿಸುವ ಪ್ರವಾಸಿಗರ ಬಗ್ಗೆ ಜಾಗೃತೆ ವಹಿಸಬೇಕು ಎಂದರು.
ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯ ಡಾ. ಉಪೇಂದ್ರ ಶಣೈ ಮಾತನಾಡಿ, ನಿಫಾಹ್ ಗೆ ಸೂಕ್ತ ಚಿಕಿತ್ಸೆಯಿಲ್ಲ. ಪುಣೆಯ ಪ್ರಯೋಗಾಲಯದಿಂದ ಬರುವ ವರದಿಯಾಧರಿಸಿ ಚಿಕಿತ್ಸೆ ನೀಡಬೇಕಿದೆ. ಅಲ್ಲದೇ ಇದೊಂದು ಮೆದುಳು ಜ್ವರ ಸಂಬಂಧಿ ಕಾಯಿಲೆಯಾಗಿದ್ದು, ಶೀಘ್ರವಾಗಿ ವ್ಯಾಪಿಸುವುದು. ಸೋಂಕು ತಗುಲಿದವರಿಗೆ ವಾಂತಿ, ಬೇಧಿ, ಸುಸ್ತು, ಜ್ವರ ಇರುವುದು. ಜ್ವರ ಮೆದುಳಿಗೆ ಶೀಘ್ರವಾಗಿ ತಗಲುವುದರಿಂದ ರೋಗಿಯು ಮೃತಪಡುವ ಸಂಭವ ಹೆಚ್ಚಾಗುವುದು ಎಂದು ತಿಳಿಸಿದರು.
ನಿಫಾಹ್ ವೈರೆಸ್ ಮೈಸೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ವರದಿಯಾಗಿಲ್ಲ. ಕೇವಲ ಅನುಮಾನ ಅಷ್ಟೇ. ಆದ್ದರಿಂದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ಸಹ ಸ್ವಚ್ಚತೆ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯರುಗಳಾದ ಡಾ.ಸತೀಶ್ ಕುಮಾರ್, ಡಾ.ಸರಿತಾ ಪವಿತ್ರನ್, ಡಾ.ಭುವನೇಶ್ವರ್ , ಡಾ.ಮಹಾದೇವ್ ರವರು ಉಪಸ್ಥಿತರಿದ್ದರು.







