ಮಡಿಕೇರಿ: ಮರದ ಕೊಂಬೆ ಬಿದ್ದು ವ್ಯಕ್ತಿ ಮೃತ್ಯು

ಮಡಿಕೇರಿ, ಜೂ.9: ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಮೊದಲ ಬಲಿಯಾಗಿದ್ದು, ಹಳೆಯ ಕಾರುಗಳ ಸರದಾರನೆಂದೇ ಖ್ಯಾತಿ ಪಡೆದಿದ್ದ ಸಿದ್ದಾಪುರದ ಪಿ.ಸಿ.ಅಹಮ್ಮದ್ ಕುಟ್ಟಿ ಹಾಜಿ(68) ಅವರು ಮರದ ಕೊಂಬೆ ಬಿದ್ದು ಮೃತಪಟ್ಟಿದ್ದಾರೆ.
ರಾತ್ರಿ ಗಾಳಿ ಮಳೆಯಿಂದ ಸಿದ್ದಾಪುರದ ಅವರ ತೋಟದಲ್ಲಿ ಮರವೊಂದು ಬಿದ್ದಿದ್ದು, ಇದನ್ನು ವೀಕ್ಷಿಸಲೆಂದು ಶನಿವಾರ ಬೆಳಗ್ಗೆ ತೋಟಕ್ಕೆ ತೆರಳಿದ್ದರು. ಈ ಸಂದರ್ಭ ಬೀಸುತ್ತಿದ್ದ ಭಾರೀ ಗಾಳಿಗೆ ಮರದ ಕೊಂಬೆಯೊಂದು ಪಿ.ಸಿ.ಅಹಮ್ಮದ್ ಕುಟ್ಟಿ ಅವರ ತಲೆಗೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೇರಳದ ಕಣ್ಣೂರು ಜಿಲ್ಲೆಯ ಕಾನ್ನಿರೋಡ್‍ನಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಪಿ.ಸಿ.ಅಹಮ್ಮದ್ ಕುಟ್ಟಿ ಹಾಜಿ ಅವರು ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಪಿ.ಸಿ.ಹಸೈನಾರ್ ಹಾಜಿ ಅವರ ಸಹೋದರನಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಅಹಮ್ಮದ್ ಕುಟ್ಟಿ ಅವರು ಹಳೆಯ ಕಾರುಗಳನ್ನು ಸಂಗ್ರಹಿಸಿಡುವ ಹವ್ಯಾಸದ ಮೂಲಕ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದರು.







