2 ವರ್ಷದ ಬಾಲಕಿಯ ಹತ್ಯೆಗೈದ 12ರ ಬಾಲಕನ ಬಂಧನ

ಗ್ರೇಟರ್ ನೊಯ್ಡ,ಜೂ.9: ನೊಯ್ಡ ಬಡಾವಣೆಯ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ ಎರಡು ವರ್ಷ ಪ್ರಾಯದ ಹೆಣ್ಣುಮಗುವನ್ನು ಕೊಲೆ ಮಾಡಿದ್ದ 12ರ ಹರೆಯದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
ಬಾಲಕನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಾಲಗೃಹಕ್ಕೆ ರವಾನಿಸಿದ್ದಾರೆ.
ನೆರೆಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದು,14 ಗಂಟೆಗಳ ಬಳಿಕ ಗ್ರಾಮದ ದೇವಸ್ಥಾನದ ಸಮೀಪದ ಪಾಳುಗದ್ದೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಮುಖ,ಕುತ್ತಿಗೆ ಮತ್ತು ಬೆನ್ನಿನ ಮೇಲೆ ಗಾಯದ ಗುರುತುಗಳಿದ್ದು,ಕಣ್ಣಿಗೂ ಗಾಯವಾಗಿತ್ತು. ಆಕೆಯನ್ನು ಇಟ್ಟಿಗೆಯಿಂದ ಹೊಡೆದು ಮತ್ತು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿರುವದನ್ನು ಆರೋಪಿ ಬಾಲಕ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದಾನೆ. ಬಾಲಕಿಯನ್ನು ಎತ್ತಿಕೊಂಡು ಪಾಳುಗದ್ದೆಗೆ ತೆರಳಿದ್ದ ಆರೋಪಿ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದಾಗ ಆಕೆ ಚೀರಿದ್ದಳು. ಇದರಿಂದ ಗ್ರಾಮಸ್ಥರು ಬರಬಹುದಂದು ಗಾಬರಿಗೊಂಡಿದ್ದ ಆತ ಕೊಂದೇ ಹಾಕಿದ್ದ.
ಬಾಲಕ ಮಗುವನ್ನು ಹೊತ್ತೊಯ್ಯುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸದರು.
ಆರೋಪಿ ಬಾಲಕ ದಿನವಿಡೀ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಎಂದು ಗ್ರಾಮಸ್ಥರು ಹೇಳಿದ್ದಾರೆ. ಮೃತ ಮಗುವಿನ ಹೆತ್ತವರು ಕೂಲಿಕಾರ್ಮಿಕರಾಗಿದ್ದರೆ,ಆರೋಪಿಯ ತಂದೆ ಪೇಂಟರ್ ಆಗಿದ್ದಾನೆ.
ತನ್ನ ಮಗಳನ್ನು ತನ್ನ ಅತ್ತಿಗೆ ಮತ್ತು ಇನ್ನೋರ್ವ ಸಂಬಂಧಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಬಾಲಕಿಯ ತಂದೆ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಕೊಲೆಯಲ್ಲಿ ಅವರಿಬ್ಬರ ಪಾತ್ರವಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.







