ಸೋಮವಾರಪೇಟೆ: ಬಿರುಗಾಳಿ ಸಹಿತ ಧಾರಾಕಾರ ಮಳೆ; ಧರೆಗುರುಳಿದ ಮರ, ಕಂಬಗಳು

ಸೋಮವಾರಪೇಟೆ,ಜೂ.09: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕಳೆದ 24 ಗಂಟೆಗಳಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.
ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಮುರಿದು, ತಂತಿಗಳು ತುಂಡಾಗಿವೆ. ಕುಂಬೂರು ಅಂಗನವಾಡಿ ಆವರಣಗೋಡೆ ಹಾಗೂ ಗೌಡಳ್ಳಿ ಗ್ರಾಮದ ವೇದಾವತಿ ಎಂಬವರ ಮನೆಯ ಮುಂಭಾಗದ ಕಾಂಪೌಂಡ್ ಮೇಲೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಗೋಡೆ ಕುಸಿದು ಹಾನಿಯಾಗಿದೆ.
ಹಾನಗಲ್ಲು ಗ್ರಾಮದ ಹೆಚ್.ಎಂ.ರವಿ, ಯಡೂರು ಗ್ರಾಮದ ಬಿ.ನಂಜಪ್ಪ, ವಡಯನಪುರ ಗ್ರಾಮದ ಸಂಶೀನಾ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಸೋಮವಾರಪೇಟೆ 56 ಮಿ.ಮೀ. ಶಾಂತಳ್ಳಿ 105.5 ಮಿ.ಮೀ, ಕುಶಾಲನಗರ 5.0 ಮಿ.ಮೀ, ಸುಂಠಿಕೊಪ್ಪ 16ಮಿ.ಮೀ., ಶನಿವಾರಸಂತೆ 52.4 ಮಿ.ಮೀ, ಕೊಡ್ಲಿಪೇಟೆ 55.5 ಮಿ.ಮೀ ಮಳೆಯಾಗಿದೆ.
ಅಪಾಯದಿಂದ ಪಾರಾದ ಬಿಇಒ: ಸಮೀಪದ ಕಾರೇಕೊಪ್ಪ ಬಳಿ ಶುಕ್ರವಾರ ರಾತ್ರಿ 8ಗಂಟೆ ಸಮಯದಲ್ಲಿ ಬಿಇಒ ನಾಗರಾಜಯ್ಯ ಮತ್ತು ಸಿಬ್ಬಂದಿಗಳು ಕರ್ತವ್ಯ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿಗೆ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ.
ಮಾದಾಪುರ ಸಮೀಪದ ಹಮ್ಮಿಯಾಲ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರು ಮಲಗಿದ್ದ ಸಂದರ್ಭ ಗಾಳಿ ಮಳೆಗೆ ಶೆಡ್ ಮುರಿದು ಬಿದ್ದು, ಕೇರಳ ಮೂಲದ ನಾಲ್ವರು ಗಾಯಗೊಂಡಿದ್ದಾರೆ. ಸೋಮವಾರಪೇಟೆ ಪಟ್ಟಣದ ಶನಿವಾರಸಂತೆ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಆ ಸಮಯದಲ್ಲಿ ವಿದ್ಯುತ್ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.
ಸೋಮವಾರಪೇಟೆ ಉಪವಿಭಾಗದ 11ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಹಾನಿಯಾಗಿದ್ದು, ಕಂಬಗಳ ಗಳನ್ನು ಸರಿಪಡಿಸಲಾಗುತ್ತಿದೆ. ಸೋಮವಾರ ಹೆಚ್ಚುವರಿ ಕಂಬಗಳನ್ನು ತರಲಾಗುವುದು. ತುರ್ತು ಕಾರ್ಯನಿರ್ವಹಣೆಗೆ ಸಿಬ್ಬಂದಿಗಳು ಹಾಗೂ ಒಂದು ಜೀಪನ್ನು ನೀಡಲು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಎಇಇ ಧನಂಜಯ ಪತ್ರಿಕೆಗೆ ತಿಳಿಸಿದ್ದಾರೆ.







