ಹಲ್ಲೆ ನಡೆಸುತ್ತಿರುವ ವೀಡಿಯೊ ವೈರಲ್: ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು, ಜೂ. 10: ಪುತ್ತೂರು ನಗರದ ಕಾಲೇಜೊಂದರ ಕ್ಯಾಂಪಸ್ ಪರಿಸರದಲ್ಲಿ 6 ತಿಂಗಳ ಹಿಂದೆ ವಿದ್ಯಾರ್ಥಿ ನಾಯಕನೊಬ್ಬ ಪ್ರತ್ಯೇಕ ಎರಡು ಘಟನೆಗಳಲ್ಲಿ ಸಿನಿಮೀಯ ಮಾದರಿಯಲ್ಲಿ ವಿದ್ಯಾರ್ಥಿಗಳಿಬ್ಬರ ಮೇಲೆ ಹಲ್ಲೆ ನಡೆಸಿರುವ ಹಾಗೂ ಗದರಿಸಿದ ವೀಡಿಯೊ ಇದೀಗ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ಜಿಲ್ಲಾ ಎಸ್ಪಿ ನೀಡಿದ ಸೂಚನೆಯಂತೆ ಪುತ್ತೂರು ನಗರ ಪೊಲೀಸರು ಈಗ ಹಳೆ ವಿದ್ಯಾರ್ಥಿಯಾಗಿರುವ ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಈಗ ಕಲ್ಲಿಮಾರ್ ನಿವಾಸಿ ಅಜೇಯ್ ಶೆಟ್ಟಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಪುತ್ತೂರಿನ ಕಾಲೇಜೊಂದರ ಕ್ಯಾಂಪಸ್ ಪರಿಸರದಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ಅಜೇಯ್ ಶೆಟ್ಟಿ ಎಂಬಾತ ಮತ್ತಿಬ್ಬರು ವಿದ್ಯಾರ್ಥಿಗೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ 6 ತಿಂಗಳ ಹಿಂದಿನ ಘಟನೆಯ ಎರಡು ಪ್ರತ್ಯೇಕ ವೀಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊಗಳನ್ನು ಗಮನಿಸಿದ ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ನೀಡಿದ ಸೂಚನೆಯ ಮೇರೆಗೆ ಇದೀಗ ಪುತ್ತೂರು ನಗರ ಪೊಲೀಸರು ಅಜೇಯ್ ಶೆಟ್ಟಿ ಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸ್ ವಶದಲ್ಲಿರುವ ಅಜೇಯ್ ಶೆಟ್ಟಿ ವಿಚಾರಣೆಯ ವೇಳೆ ಸರಿಯಾದ ಮಾಹಿತಿ ನೀಡದಿರುವುದರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಯಾರೆಂಬುವುದು ಇನ್ನೂ ಖಚಿತಗೊಂಡಿಲ್ಲ ಎನ್ನಲಾಗಿದ್ದು, ಈ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.