ಸಾಹಿತಿ, ಸಾಹಿತ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಎಂ.ಎಸ್.ಆತ್ಮಾನಂದ

ಮಂಡ್ಯ, ಜೂ.10: ಸಾಹಿತಿ ಮತ್ತು ಸಾಹಿತ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ. ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅಭಿಪ್ರಾಯಪಟ್ಟಿದ್ದಾರೆ.
ದಿವ್ಯಜ್ಯೋತಿ ಕಲಾ ಮತ್ತು ಸಾಹಿತ್ಯ ವೇದಿಕೆ ವತಿಯಿಂದ ನಗರದ ಗಾಂಧಿಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ರವಿವಾರ ನಡೆದ ರಾಜ್ಯಮಟ್ಟದ ಕವಿಗೋಷ್ಠಿ, ಇತರೆ ಕಾರ್ಯಕ್ರಮಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಮೌಢ್ಯವನ್ನು ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಸಾಹಿತಿಗಳ ಪಾತ್ರ ಅಪಾರವಾಗಿದೆ. ಕವಿ ಕಾಣದ್ದನ್ನು ರವಿ ಕಂಡ ಎನ್ನುವಂತೆ ಸಾಹಿತಿ ತನ್ನ ದಿವ್ಯ ದೃಷ್ಠಿಯಿಂದ ಸಮಾಜದ ಎಲ್ಲವನ್ನೂ ತಿಳಿದು ಅಂಕು-ಡೊಂಕುಗಳನ್ನು ತನ್ನ ಲೇಖನಿ ಮೂಲಕ ತಿದ್ದುವ ಪ್ರಯತ್ನ ಮಾಡುತ್ತಿದ್ದಾನೆ. ಇದರಿಂದ ಆರೋಗ್ಯವಂತ ಸಮಾಜವನ್ನು ಕಾಣಲು ಸಾಧ್ಯ ಎಂದು ಅವರು ಹೇಳಿದರು.
ಮೈಸೂರು ಸಂಸ್ಥಾನದ ಪ್ರಮುಖ ಅರಸುಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಾತ್ರ ಅದ್ವಿತೀಯವಾದದ್ದು. ಅವರ ದೂರದೃಷ್ಠಿ, ಸಮಾಜ ಮತ್ತು ಪ್ರಜೆಗಳ ಬಗೆಗಿನ ಕಾಳಯಿಂದಾಗಿ ಇಂದು ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಅವರು ಸ್ಮರಿಸಿದರು.
ಕೃಷಿಕ್ ಲಯನ್ಸ್ ಸಂಸ್ಥೆ ಪೋಷಕ ಕೆ.ಟಿ. ಹನುಮಂತು ಮಾತನಾಡಿ, ಜಿಲ್ಲೆ ಮತ್ತು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಅಭಿವೃದ್ಧಿಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಜಿಲ್ಲಾ ಕೇಂದ್ರವಾದ ಮಂಡ್ಯ ನಗರದಲ್ಲಿ ಅತಿ ಶೀಘ್ರವಾಗಿ ಸ್ಥಾಪಿಸುವ ಅಗತ್ಯವಿದೆ. ಜಿಲ್ಲೆಯ ಪ್ರತಿ ಮನೆ ಮನೆಯಲ್ಲೂ ನಾಲ್ವಡಿ ಅವರ ಫೋಟೋ ಇಟ್ಟು ಪೂಜೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಭಾ ಪ್ರಶಸ್ತಿ ಹಾಗೂ ವಿಶ್ವಕರ್ಮ ಸಮಾಜ ಸೇವಾ ರತ್ನ ಪ್ರಶಸ್ತಿ, ಅಪೂರ್ವ ಸಮಾಜ ಸೇವಾ ರತ್ನ ಹಾಗೂ ಅಪೂರ್ವ ಸಾಹಿತ್ಯ ಸೇವಾ ರತ್ನ, ಜನಪ್ರಿಯ ಸೇವಾ ರತ್ನ, ಅರ್ಚಕ ರತ್ನ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಬಕಾರಿ ಇನ್ಸ್ ಪೆಕ್ಟರ್ ನಾರಾಯಣ್ ತಿರುಮಲಾಪುರ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿದ್ದರು. ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಮಣಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ದಿವ್ಯಜ್ಯೋತಿ ಕಲಾ ಮತ್ತು ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಬಿ. ರಾಮೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ. ದ್ಯಾವಪ್ಪ, ಚುಸಾಪ ಅಧ್ಯಕ್ಷ ಜಿ.ವಿ. ನಾಗರಾಜು, ಇತರ ಗಣ್ಯರು ಉಪಸ್ಥಿತರಿದ್ದರು.







