ಅಫ್ಘಾನ್‌ನಲ್ಲಿ ಶಾಂತಿ ಸ್ಥಾಪನೆ: ಅಶ್ರಫ್ ಘನಿ ಪ್ರಯತ್ನಗಳಿಗೆ ಮೋದಿ ಪ್ರಶಂಸೆ
.jpg.jpg)
ಕ್ವಿಂಗ್‌ಡಾವೊ,ಜೂ.10: ಅಫ್ಘಾನಿಸ್ತಾನವು ತೀವ್ರವಾದ ಹಾಗೂ ಭಯೋತ್ಪಾದನೆಯ ಪರಿಣಾಮಕ್ಕೆ ಒಂದು ದುರದೃಷ್ಟಕರ ಉದಾಹರಣೆಯಾಗಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಬಣ್ಣಿಸಿದ್ದಾರೆ ಹಾಗೂ ಅಂತರ್ಯುದ್ಧದಿಂದ ಜರ್ಜರಿತವಾದ ಆ ದೇಶದಲ್ಲಿ ಶಾಂತಿ ಸ್ಥಾಪನೆಗೆ ಅಧ್ಯಕ್ಷ ಅಶ್ರಫ್ ಘನಿ ನಡೆಸುತ್ತಿರುವ ಪ್ರಯತ್ನಗಳನ್ನು ಪ್ರಶಂಸಿಸಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ ಸೀಮಿತ ಕಾಲಾವಧಿಯ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅವರು ಎಸ್‌ಸಿಓ ಬ್ಯಾನರ್‌ನಡಿಯಲ್ಲಿ ಭಾರತವು ಅಫ್ಘಾನಿಸ್ತಾನ ಸಂಪರ್ಕ ಸಮಿತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಲಿದೆಯೆಂದರು.
ಅಫ್ಘಾನಿಸ್ತಾನದ ಸಾರ್ವಭೌಮತೆ, ಭದ್ರತೆ ಹಾಗೂ ಪ್ರಜಾತಂತ್ರಕ್ಕೆ ಬೆದರಿಕೆಗೊಳಗಾಗಲು ಈ ಹಿಂದೆ ಇದ್ದಂತಹ ಕಾರಣಗಳು ಮತ್ತೊಮ್ಮೆ ಮರುಕಳಿಸದಂತೆ ನೋಡುವುದು ನಮ್ಮ ಸಮಾನ ಹೊಣೆಗಾರಿಕೆಯಾಗಿದೆಯೆಂದು ಮೋದಿ ತಿಳಿಸಿದರು.
ರಂಝಾನ್ ಹಿನ್ನೆಲೆಯಲ್ಲಿ ತಾಲಿಬಾನ್ ಬಂಡುಕೋರರ ಜೊತೆ ಒಂದು ವಾರದವರೆಗೆ ಕದನವಿರಾಮವನ್ನು ಘೋಷಿಸಿದ ಅಫ್ಘಾನ್ ಅಧ್ಯಕ್ಷರ ಅಚ್ಚರಿಯ ನಡೆಯನ್ನು ಮೋದಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಈ ಕದನವಿರಾಮವು ರಮಝಾನ್ ತಿಂಗಳ 27 ದಿನದಿಂದ ಆರಂಭಗೊಂಡು ಈದುಲ್ ಫಿತ್ರ್ ಹಬ್ಬದ ಆನಂತರದ ಐದನೆಯ ದಿನದವರೆಗೆ ಮುಂದುವರಿಯಲಿದೆಯೆಂದು ಅಧ್ಯಕ್ಷ ಕಳೆದ ವಾರ ಟ್ವೀಟ್ ಮಾಡಿದ್ದರು.







