ನಾಗಮಂಗಲ: ರಂಜಾನ್ ಪ್ರಯುಕ್ತ ಪೌರಕಾರ್ಮಿಕರಿಗೆ ಔತಣಕೂಟ

ನಾಗಮಂಗಲ, ಜೂ.10: ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರು ಪೌರಕಾರ್ಮಿಕರು ಮತ್ತು ಕುಟುಂಬದವರಿಗಾಗಿ ಔತಣಕೂಟ ಮತ್ತು ಸನ್ಮಾನ ಕಾರ್ಯಕ್ರಮವನ್ನು ರವಿವಾರ ಪಟ್ಟಣದಲ್ಲಿ ಆಯೋಜಿಸಿದ್ದರು.
ಪಟ್ಟಣದ ಉಮ್ಮರ್ ಫಾರೂಖ್ ಮಸೀದಿ ಮತ್ತು ಇಖ್ರಾ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಗಮಂಗಲ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಪೌರಕಾರ್ಮಿಕರಿಗಾಗಿ ಈ ಔತಣಕೂಟ ಏರ್ಪಡಿಸಿಲಾಗಿತ್ತು.
ಯಾವ ವರ್ಗದವರಾಗಿದ್ದರೂ ಸರಿ ಹಸಿದವರಿಗೆ ಅನ್ನ ನೀಡುವುದು ಮತ್ತು ಅವರು ಪರಿಚಯದವರಾಗಿರಲಿ, ಇಲ್ಲದವರಾಗಿರಿಲಿ ಅವರ ಕ್ಷೇಮ ವಿಚಾರಿಸುವುದು ಇಸ್ಲಾಂ ಧರ್ಮದಲ್ಲಿ ಪವಿತ್ರ ಕೆಲಸವಾಗಿದೆ ಎಂದು ಪ್ರವಾದಿ ಮುಹಮ್ಮದ್ ರವರು ಹೇಳಿದ್ದಾರೆ ಎಂದು ಮುಖಂಡರು ಹೇಳಿದರು.
ನಮ್ಮ ಎಲ್ಲಾ ಕಲ್ಮಶಗಳನ್ನು ತಾಯಿಯಾದವರು ಮೊದಲು ತೊಳೆಯುತ್ತಾಳೆ. ನಂತರದಲ್ಲಿ ಪೌರಕಾರ್ಮಿಕರು ಸ್ವಚ್ಚಗೊಳಿಸುವ ಘನಕಾರ್ಯ ಮಾಡುತ್ತಿದ್ದಾರೆ. ಇಂತವರಿಗೆ ನಾವು ನಮ್ಮ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಮಸ್ತ ಮುಸ್ಲಿಂ ಭಾಂದವರ ಪರವಾಗಿ ಔತಣಕೂಟ ಏರ್ಪಡಿಸಿದ್ದೇವೆ ಹಾಗೂ ಹಲವರನ್ನು ಶಾಲು ಹೊದಿಸಿ ಹಾರಹಾಕಿ ಸನ್ಮಾನಿಸುತ್ತಿದ್ದೇವೆ ಎಂದು ಅವರು ಹಬ್ಬದ ಸಂಭ್ರಮ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಸೀದಿಯ ಮುಖಂಡರು ಟ್ರಸ್ಟ್ ನ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನೆರವೇರಿಸಿದರು.







