ಮೂಡಿಗೆರೆ: ಧಾರಾಕಾರ ಮಳೆಗೆ ರಸ್ತೆ ಸಂಚಾರ, ವಿದ್ಯುತ್ ವ್ಯತ್ಯಯ

ಮೂಡಿಗೆರೆ: ಜೂ.10 ತಾಲೂಕಿನ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿರುವ ಪರಿಣಾಮ ಅಪಾರ ಹಾನಿ ಸಂಭವಿಸಿದೆ.
ತಾಲೂಕಿನ ಗೌಡಹಳ್ಳಿ, ಹೊಸಕೆರೆ, ಭೈರಾಪುರ, ಊರುಬಗೆ, ಮೇಕನಗದ್ದೆ, ಮೂಲರಹಳ್ಳಿ, ಗುತ್ತಿಹಳ್ಳಿ ಹಳೇಕೆರೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಗಾಳಿಯ ರಭಸಕ್ಕೆ ಮರಗಳು ಧರೆಗುರುಳುತ್ತಿದ್ದು ಹಲವೆಡೆ ರಸ್ತೆಯ ಮೇಲೆ ಮರ ಬಿದ್ದಿರುವ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿದೆ. ಶನಿವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಗೌಡಹಳ್ಳಿ-ಹಳೇಕೆರೆ ಮಧ್ಯೆ ರಸ್ತೆಯ ಮೇಲೆ ಬೃಹತ್ ಮರ ಉರುಳಿದ ಪರಿಣಾಮ ವಾಹನಗಳು ಅತ್ತಿಂದಿತ್ತ ಸಂಚಾರಿಸಲಾಗದೇ ಸಾರ್ವಜನಿಕರು ಪರದಾಡುವಂತಾಗಿದೆ. ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರ ಮುಕ್ತಗೊಳಿಸುವಲ್ಲಿ ಶ್ರಮಿಸಿದ್ದಾರೆ. ಜನ್ನಾಪುರ-ಒಣಗೂರು ರಾಜ್ಯ ಹೆದ್ದಾರಿಯ ಬೆಟ್ಟದಮನೆಯಲ್ಲಿ ರಸ್ತೆಗೆ ಅಡ್ಡಲಾಗಿ ಮರವೊಂದು ಉರುಳಿ ಬಿದ್ದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಈ ಭಾಗದ ಹಳ್ಳಕೊಳ್ಳಗಳೆಲ್ಲ ತುಂಬು ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿವೆ. ಗೌಡಹಳ್ಳಿ-ಮೇಕನಗದ್ದೆ ರಸ್ತೆ ಸೇತುವೆಯ ಮಟ್ಟಕ್ಕೆ ಹಳ್ಳ ಹರಿಯುತ್ತಿದ್ದು ಅಪಾಯದ ಮುನ್ಸೂಚನೆ ನೀಡಿದೆ. ಈ ಸೇತುವೆ ಶಿಥಿಲಗೊಂಡಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ತಂತಿಗಳ ಮೇಲೆ ಅನೇಕ ಕಡೆ ಮರಬಿದ್ದಿರುವ ಪರಿಣಾಮ ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಜನರು ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ. ವಿದ್ಯುತ್ ಇಲ್ಲದೆ ಮೊಬೈಲ್ ಟವರ್ ಗಳು ಸ್ಥಗಿತಗೊಂಡಿದ್ದು, ಜನ ಹೊರ ಪ್ರಪಂಚದ ಸಂಪರ್ಕ ಕಳೆದುಕೊಂಡಿದ್ದಾರೆ.
ದಿಢೀರ್ ಮಳೆಯಿಂದ ರೈತರ ಭತ್ತದ ಸಸಿಮಡಿ ಸೇರಿದಂತೆ ಜಮೀನು ಹಾಗೂ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ.







