ಯು.ಎ.ಇ ಮೂಡಿಗೆರೆ ವೆಲ್ಫೇರ್ ಅಸೋಷಿಯೇಶನ್‍ನಿಂದ ಇಫ್ತಾರ್ ಕಿಟ್ ವಿತರಣೆ

ಮೂಡಿಗೆರೆ,ಜೂ.10: ರಂಜಾನ್ ತಿಂಗಳಲ್ಲಿ ದಾನ, ಧರ್ಮ ನೀಡಿದರೆ, ಇಹಪರರದಲ್ಲಿ ಯಶಸ್ಸು ದೊರಕಲಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಹೇಳಿದರು.
ಅವರು ಭಾನುವಾರ ಜಾಮಿಯಾ ಶಾದಿ ಮಹಲ್‍ನಲ್ಲಿ ಯು.ಎ.ಇ.ಮೂಡಿಗೆರೆ ವೆಲ್ಫೇರ್ ಅಸೋಷಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪವಿತ್ರ ರಂಜಾನ್ ಮಾಸದ ಇಫ್ತಾರ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದೇಶಿ ನೆಲದಲ್ಲಿ ಕಠಿಣ ಪರಿಶ್ರಮದ ಮೂಲಕ ಬೆವರು ಸುರಿಸಿ ದುಡಿದು ತನ್ನ ಕುಟುಂಬವನ್ನು ಸಾಕುವ ಜತೆಗೆ ಸಂಘಟನೆಗಳನ್ನು ಕಟ್ಟಿ, ಬಡವರ ಬಗ್ಗೆ ಕಾಳಜಿ ಹೊಂದುತ್ತಿರುವ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ವಿದೇಶದಲ್ಲಿ ದುಡಿಯುವ ವೇಳೆ ತನ್ನ ಮನೆಯಲ್ಲಿ ಶುಭಕಾರ್ಯಗಳು ಅಥವಾ ಸಾವು-ನೋವು ಸಂಭವಿಸಿದರೆ ಭಾರತದಲ್ಲಿರುವ ತನ್ನ ಮನೆಗೆ ಬರಲು ಸಾಧ್ಯವಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ದುಡಿಯುತ್ತಿರುತ್ತಾರೆ. ಇಂಥವರು ಸಮಾಜದ ಸುಧಾರಣೆಗೆಂದು ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಳ್ಳುತ್ತಾರೆ ಎಂದು ತಿಳಿಸಿದರು.
ಯುಎಇ ಮೂಡಿಗೆರೆ ವೆಲ್ಫೇರ್ ಅಸೋಷಿಯೇಷನ್ ಉಪಾಧ್ಯಕ್ಷ ಸಬ್ಬೇನಹಳ್ಳಿ ಹಂಝ ಮಾತನಾಡಿ, ಕಳೆದ 10 ವರ್ಷದ ಹಿಂದೆ ತಮ್ಮ ಬಳಗ ಸೇರಿಕೊಂಡು ಈ ಸಂಘಟನೆಗೆ ದುಬೈಯಲ್ಲಿ ಚಾಲನೆ ನೀಡಲಾಯಿತು. ಬಳಿಕ ಭಾರತದಲ್ಲಿರುವ ಅತೀ ಬಡ ಕುಟುಂಬಗಳನ್ನು ಗುರುತಿಸಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು, ಅನಾರೋಗ್ಯಕ್ಕೆ ತುತ್ತಾದ ರೋಗಿಗಳು ಮತ್ತಿತರೆ ಅರ್ಹ ಫಲಾನುಭವಿಗಳಿಗೆ ಅವರ ಕಷ್ಟದಲ್ಲಿ ಪಾಲ್ಗೊಳ್ಳುವ ಜೊತೆಗೆ ಉಚಿತ ಆಂಬುಲೆನ್ಸ್ ಸೇವೆಯನ್ನು ಸಂಘದಿಂದ ಒದಗಿಸಿದ್ದೇವೆ. ರಂಜಾನ್ ತಿಂಗಳಲ್ಲಿ ಉಪವಾಸ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವ ಬಡತನ ರೇಖೆಗಿಂತ ಕೆಳಗಿನವರಿಗೆ ರಂಝಾನ್ ಕಿಟ್ ಸಹಿತ ಹಲವು ರೀತಿಯ ಸಮಾಜ ಸೇವೆ ಮಾಡಿಕೊಂಡು ಬಂದಿರುವ ನಮ್ಮ ಸಂಘಟನೆ ಭಾರತ ಮತ್ತು ವಿದೇಶದಲ್ಲಿ ಸಕ್ರಿಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಮಾತನಾಡಿ, ಕಾರ್ಮಿಕರಾಗಿ ದುಡಿಯುವ ಬಡತನದ ಬೇಗೆಯಲ್ಲಿ ಬೆಂದು ಬಸವಳಿಯುವ ವರ್ಗಗಳ ಸರ್ವೆ ನಡೆಸಿ ಅಂತಹ ಕುಟುಂಬದ ಜೀವನ ಸಂಕಷ್ಟ ಬಗೆಹರಿಸುವ ಸಣ್ಣಮಟ್ಟದ ಪ್ರಯತ್ನವನ್ನು ಸಂಘ ಸಂಸ್ಥೆಗಳು ಮಾಡಬೇಕು. ಸಮಾಜ ಸೇವೆ ಮಾಡುವ ಸಂಘಟನೆಗಳು ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಲಿದೆ. ಹಾಗಾಗಿ ಶ್ರೀಮಂತ ವರ್ಗ ಸಮಾಜದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಸಮಾಜಸೇವೆಗೆ ಶಕ್ತಿ ತುಂಬಬೇಕು ಎಂದು ತಿಳಿಸಿದರು.
ಈ ವೇಳೆ ಸುಮಾರು 500 ಮಂದಿಗೆ ರಂಜಾನ್ ಮಾಸದ ಇಫ್ತಾರ್ ಕಿಟ್ ವಿತರಣೆ ಮಾಡಲಾಯಿತು. ಮೌಲಾನ ವಾಜಿದ್ ಹಾಜಿ ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ತಾಲೂಕು ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಎ.ಸಿ.ಅಯೂಬ್ ಹಾಜಿ, ಅಬ್ದುಲ್ ಸುಕುರ್ ಸಾಬ್ ಹಾಜಿ, ಜದೀದ್ ಮಸೀದಿ ಅಧ್ಯಕ್ಷ ಪ್ಯಾರುಜಾನ್ ಹಾಜಿ, ಬಿದರಹಳ್ಳಿ ಜಾಮಿಯಾ ಮಸೀದಿ ಅಧ್ಯಕ್ಷ ಅಬ್ರಾರ್ ಅಹ್ಮದ್, ಸಮಾಜ ಸೇವಕ ಫಿಶ್ ಮೋನು, ಕಾಫಿ ಬೆಳೆಗಾರ ಹಂಡುಗುಳಿ ಉಮರಬ್ಬ ಹಾಜಿ, ಪೀಸ್ ಅಂಡ್ ಅವೇರ್‍ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ, ಬಿ.ಎಚ್.ಮಹಮ್ಮದ್, ಅಬ್ದುಲ್ ರಝಾಕ್, ಎಜಾಜ್ ಪಾಶ, ಮೊಹಮ್ಮದ್ ಆರಿಫ್ ಜಾನ್, ಸಿರಾಜ್ ಭೂತನಕಾಡು, ಅಲ್ಲಾವುದ್ದೀನ್, ಮೊಹಮ್ಮದ್ ನಯೀಮ್ ಪಾಶ ಇದ್ದರು.







