ಚಿಕ್ಕಮಗಳೂರು: ಜಿಲ್ಲಾದ್ಯಂತ ಮುಂಗಾರು ಮಳೆಯ ಆರ್ಭಟ

ಚಿಕ್ಕಮಗಳೂರು,ಜೂ.10: ಚಿಕ್ಕಮಗಳೂರು ಜಿಲ್ಲಾದ್ಯಂತ ಮುಂಗಾರು ಮಳೆಯ ಆರ್ಭಟ ಭಾನುವಾರವು ಮುಂದುವರೆದಿದ್ದು, ಮಲೆನಾಡು ಭಾಗದ ಶೃಂಗೇರಿ, ಮೂಡಿಗೆರೆ, ಕಳಸ ಭಾಗದಲ್ಲಿ ಮಳೆಯಾಗಿದೆ.
ಶೃಂಗೇರಿ ತಾಲೂಕಿನ ತುಂಗಾ, ಭದ್ರಾನದಿಗಳ ನೀರಿನ ಹರಿವು ಜಾಸ್ತಿಯಾಗಿದೆ. ಬಾಳೆಹೊನ್ನೂರು, ಕಳಸ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಚಿಕ್ಕಮಗಳೂರು ಸುತ್ತಮುತ್ತ ಗ್ರಾಮ ಹಾಗೂ ಬಯಲು ಸೀಮೆ ಭಾಗದ ತಾಲೂಕುಗಳಾದ ಕಡೂರು, ತರೀಕೆರೆ ಭಾಗದಲ್ಲಿ ಸತತವಾಗಿ ತುಂತುರು ಮಳೆಯಾಗುತ್ತಿದೆ.
ಶನಿವಾರ ರಾತ್ರಿ ಸುರಿದ ಮಳೆ, ಗಾಳಿಯಿಂದ ಬಣಕಲ್ ಸಮೀಪದ ಚಾರ್ಮುಡಿ ಘಾಟ್‍ನಲ್ಲಿ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರಕ್ಕೆ ತಡೆ ಉಂಟಾಗಿ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿತ್ತು. ಮೂಡಿಗೆರೆ, ಕಳಸ ಭಾಗದಲ್ಲಿ ಮಳೆ ಗಾಳಿಯಿಂದ ಬೃಹತ್ ಆಕಾರದ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಸತತ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಳ್ಳ, ಕೊಳ್ಳ, ಕೆರೆಗಳ ನೀರಿನ ಮಟ್ಟವು ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ.







