ಎರಡು ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಿದ ನಾಲ್ವರು ಸ್ಟಾರ್ ಆಟಗಾರರು
ಮಾಸ್ಕೋ, ಜೂ.10: ರಶ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ದಿನಗಳಲ್ಲಿ ಟೂರ್ನಿಯ ಇತಿಹಾಸದಲ್ಲಿ ದಾಖಲಾದ ಅಂಕಿ-ಅಂಶಗಳು ಹೆಚ್ಚು ಗಮನ ಸೆಳೆಯುತ್ತ್ತವೆ. ಈ ವರೆಗೆ 56 ಆಟಗಾರರು ಎರಡು ಬಾರಿ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದಾರೆ. ಈ ಪೈಕಿ ಕೇವಲ ನಾಲ್ವರು ಮಾತ್ರ ಎರಡೂ ವಿಶ್ವಕಪ್‌ನಲ್ಲಿ ಗೋಲು ಬಾರಿಸಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಜೋಡಿಯೆಂದರೆ ವಾವಾ ಹಾಗೂ ಪೀಲೆ. 1958ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಈ ಇಬ್ಬರು ಆಟಗಾರರು ತಲಾ ಎರಡು ಗೋಲು ಬಾರಿಸಿ ಬ್ರೆಝಿಲ್‌ಗೆ ಆತಿಥೇಯ ಸ್ವೀಡನ್ ವಿರುದ್ಧ 5-2 ಅಂತರದ ಗೆಲುವು ತಂದುಕೊಟ್ಟಿದ್ದರು. ನಾಲ್ಕು ವರ್ಷಗಳ ಬಳಿಕ 1962ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವಾವಾ ಏಕೈಕ ಗೋಲು ಬಾರಿಸಿದ್ದರು. ಆಗ ಬ್ರೆಝಿಲ್ ತಂಡ ಝೆಕೊಸ್ಲೋವಾಕಿಯ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿತ್ತು. ಪೀಲೆ ಗಾಯದ ಸಮಸ್ಯೆಯಿಂದಾಗಿ 1962ರ ಫೈನಲ್ ಪಂದ್ಯ ಆಡಿರಲಿಲ್ಲ. 1970ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಇಟಲಿ ವಿರುದ್ಧ ಹೆಡರ್‌ನ ಮೂಲಕ ಗೋಲು ಬಾರಿಸಿದ್ದ ಪೀಲೆ ಬ್ರೆಝಿಲ್‌ಗೆ 4-1 ಅಂತರದ ಗೆಲುವು ತಂದಿದ್ದರು. ಎರಡು ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಿದ ಇನ್ನೊಬ್ಬ ಆಟಗಾರ ಜರ್ಮನಿಯ ಪಾಲ್ ಬ್ರೆಟ್ನರ್. 1974ರ ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಜರ್ಮನಿ ತಂಡ ಹಾಲೆಂಡ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದ್ದು, ಜರ್ಮನಿ ಪರ ಪೆನಾಲ್ಟಿ ಕಾರ್ನರ್‌ನಲ್ಲಿ ಬ್ರೆಟ್ನರ್ ಗೋಲು ಬಾರಿಸಿದ್ದರು. 8 ವರ್ಷಗಳ ಬಳಿಕ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಇಟಲಿ ವಿರುದ್ಧ ವೆಸ್ಟ್ ಜರ್ಮನಿ 1-3 ರಿಂದ ಸೋತಿತ್ತು. ಈ ಪಂದ್ಯದಲ್ಲಿ 83ನೇ ನಿಮಿಷದಲ್ಲಿ ಬ್ರೆಟ್ನರ್ ಸಮಾಧಾನಕರ ಗೋಲು ಬಾರಿಸಿದ್ದರು. ಫ್ರಾನ್ಸ್‌ನ ಝೈನುದ್ದೀನ್ ಝೈದಾನ್ ವಿಶ್ವಕಪ್‌ನ ಎರಡು ಫೈನಲ್‌ನಲ್ಲಿ ಗೋಲು ಬಾರಿಸಿದ ನಾಲ್ಕನೇ ಆಟಗಾರನಾಗಿದ್ದಾರೆ. 1998ರಲ್ಲಿ ಬ್ರೆಝಿಲ್ ವಿರುದ್ಧ ಫ್ರಾನ್ಸ್ ತಂಡ 3-0 ಗೋಲುಗಳಿಂದ ಜಯ ಸಾಧಿಸಿದ್ದ ವೇಳೆ ಝೈದಾನ್ ಎರಡು ಗೋಲುಗಳನ್ನು ಹೆಡರ್ ಮೂಲಕ ದಾಖಲಿಸಿದ್ದರು. 2006ರ ವಿಶ್ವಕಪ್ ಫೈನಲ್‌ನಲ್ಲಿ ಇಟಲಿ ವಿರುದ್ಧ ಝೈದಾನ್ ಏಕೈಕ ಗೋಲು ಬಾರಿಸಿದ್ದರು. ಪಂದ್ಯ 1-1 ರಿಂದ ಸಮಬಲಗೊಂಡ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ತಂಡ ಫ್ರಾನ್ಸ್‌ನ್ನು 5-3 ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿತ್ತು.





