ಕಲ್ಲು ತೂರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಬಿಜೆಪಿ ಸಂಸದ

ಹೊಸದಿಲ್ಲಿ, ಜೂ.11: "ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವ ಬದಲು ಅವರನ್ನು ಗುಂಡಿಕ್ಕಿ ಸಾಯಿಸಬೇಕು'' ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಡಿ.ಪಿ.ವತ್ಸ್ ವಿವಾದ ಸೃಷ್ಟಿಸಿದ್ದಾರೆ.
"ಕಲ್ಲು ತೂರಾಟಗಾರರ ವಿರುದ್ಧ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಓದಿದೆ. ಆದರೆ ಅವರನ್ನು ಗೂಂಡಿಕ್ಕಿ ಸಾಯಿಸಬೇಕು ಎಂದು ನನಗನಿಸುತ್ತದೆ'' ಎಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕಾಶ್ಮೀರಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್, "ಮಕ್ಕಳು ತಪ್ಪು ಮಾಡುವುದು ಸಹಜ. ಮೊದಲ ಬಾರಿ ಕಲ್ಲು ತೂರಾಟ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ ಹಾಗೂ ಅವರ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ'' ಎಂದಿದ್ದರಲ್ಲದೆ "ಸುಮಾರು 10,000 ಮಂದಿಯ ವಿರುದ್ಧದ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಲಾಗಿದೆ'' ಎಂದಿದ್ದರು.
ರಾಜ್ ನಾಥ್ ಸಿಂಗ್ ಹೇಳಿಕೆ ನೀಡಿದ ಕೆಲ ದಿನಗಳಲ್ಲಿಯೇ ವತ್ಸ್ ಹೇಳಿಕೆ ಬಂದಿದೆ. ಕಳೆದ ವಾರ ಕೇಂದ್ರ ಸರಕಾರ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ, "ಕಲ್ಲು ತೂರಾಟಗಾರರ ವಿರುದ್ಧದ ಎಫ್‍ಐಆರ್ ಗಳನ್ನು ವಾಪಸ್ ಪಡೆಯುವ ಜಮ್ಮು ಕಾಶ್ಮೀರ ಸರಕಾರದ ನಿರ್ಧಾರ ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುವುದಲ್ಲದೆ ಉಗ್ರರಿಗೆ ನಾಗರಿಕರನ್ನು ತಮ್ಮ ಕೃತ್ಯಗಳಿಗೆ ಗುರಾಣಿಗಳನ್ನಾಗಿಸಲು ಆಸ್ಪದ ನೀಡಿದಂತಾಗುತ್ತದೆ. ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಭದ್ರತಾ ಪಡೆಗಳ ಮಾನವ ಹಕ್ಕುಗಳನ್ನು ಸಂರಕ್ಷಿಸಲು ರಾಜ್ಯ ಸರಕಾರ ಕಲ್ಲು ತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದಿತ್ತು.
ಕಲ್ಲು ತೂರಾಟಗಾರರ ವಿರುದ್ಧದ ಪ್ರಕರಣ ವಾಪಸ್ ಪಡೆಯುವ ನಿರ್ಧಾರವನ್ನು ಪ್ರಶ್ನಿಸಿ ಇಬ್ಬರು ಸೇವಾ ನಿರತ ಸೇನಾಧಿಕಾರಿಗಳ ಹಾಗೂ ಒಬ್ಬ ನಿವೃತ್ತ ಸೇನಾಧಿಕಾರಿಯ ಮಕ್ಕಳು ಸಲ್ಲಿಸಿದ ಅಪೀಲಿನ ಹಿನ್ನೆಲೆಯಲ್ಲಿ ಕೇಂದ್ರವು ಆಯೋಗದ ಮುಂದೆ ಹೇಳಿಕೆ ನೀಡಿತ್ತು.







