ಪಡುತೋನ್ಸೆ, ಬಡಾನಿಡಿಯೂರಿನಲ್ಲಿ ವಿದ್ಯುತ್ ಸಮಸ್ಯೆ: ಕಲ್ಯಾಣಪುರ ಮೆಸ್ಕಾಂ ಕಚೇರಿಗೆ ಮುತ್ತಿಗೆ

ಉಡುಪಿ, ಜೂ.11: ಕಳೆದ ಹಲವು ದಿನಗಳಿಂದ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರ ವಿರುದ್ಧ ಪಡುತೋನ್ಸೆ, ಬಡಾನಿಡಿಯೂರು, ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಸೋಮವಾರ ನೇಜಾರಿನಲ್ಲಿರುವ ಮೆಸ್ಕಾಂ ಕಲ್ಯಾಣಪುರ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ದರು.
ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಕಚೇರಿ ಮುಂದೆ ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ 10ಗಂಟೆಯಾದರೂ ವಿಭಾಗ ಅಧಿಕಾರಿ ನವೀನ್ ಕಚೇರಿಯಲ್ಲಿ ಇಲ್ಲದಿರುವುದನ್ನು ಕಂಡ ಗ್ರಾಮಸ್ಥರು, ಇತರ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಕಚೇರಿಗೆ ಬಾಗಿಲು ಹಾಕಿ ದರು. ಬಳಿಕ ಕಚೇರಿಯ ಗೇಟು ಹಾಕಿದ ಪ್ರತಿಭಟನಕಾರರು ವಿಭಾಗ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಎರಡು ಗಂಟೆಗಳ ನಂತರ ಕಚೇರಿಗೆ ಆಗಮಿಸಿದ ವಿಭಾಗ ಅಧಿಕಾರಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಇವರು ಸರಿಯಾದ ಉತ್ತರ ನೀಡದ ಕಾರಣ ಸಹಾಯಕ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಮಲ್ಪೆ ಪೊಲೀಸರು ಬಂದು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಕಚೇರಿಯ ಬಾಗಿಲು ತೆಗೆಸಿದರು.
ಸಂಜೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಮುಂದುರವೆರಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪಡುತೋನ್ಸೆ ಗ್ರಾಪಂ ಅಧ್ಯಕ್ಷೆ ಫೌಝೀಯ ಸಾಧಿಕ್, ಸದಸ್ಯ ನಿತ್ಯಾನಂದ ಕೆಮ್ಮಣ್ಣು, ಮಾಜಿ ತಾಪಂ ಸದಸ್ಯ ರೆಹಮತುಲ್ಲಾ, ಸಾಧಿಕ್ ಹೂಡೆ, ಹುಸೈನ್ ಕೋಡಿಬೆಂಗ್ರೆ ಮೊದಲಾದವರು ಹಾಜರಿದ್ದರು.
ಪ್ರತ್ಯೇಕ ಶಾಖಾ ಕಚೇರಿ ನೀಡಿ: ‘ಕಳೆದ 10-12 ದಿನಗಳಿಂದ ಇಡೀ ಗ್ರಾಮದಲ್ಲಿ ವಿದ್ಯುತ್ ಇಲ್ಲ. ಅಧಿಕಾರಿಗಳು ಕರೆ ಮಾಡಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಲೈನ್‌ಮೆನ್‌ಗಳು ದುರಸ್ತಿ ಮಾಡಲು ಕೂಡ ಬರುತ್ತಿಲ್ಲ. ಕೆಮ್ಮಣ್ಣು, ಹೂಡೆ, ಬೆಂಗ್ರೆ, ತೋನ್ಸೆ, ಕಲ್ಯಾಣಪುರ ಸನ್ಯಾಸಿಮಠ, ಬಡಾನಿಡಿ ಯೂರು ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳು ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿದೆ ಇದರಿಂದ ಜನ ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಮೆಸ್ಕಾಂ ಮಾಡಿರುವ ತಪ್ಪಿಗೆ ಜನ ಗ್ರಾಪಂ ಕಚೇರಿಗೆ ಬಂದು ನಮಗೆ ಬೈಯುತ್ತಿದ್ದಾರೆ’ ಎಂದು ಕೆಮ್ಮಣ್ಣು ಗ್ರಾಪಂ ಅಧ್ಯಕ್ಷೆ ಪೌಝೀಯಾ ತಿಳಿಸಿದರು.
‘ಪಡುತೋನ್ಸೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 6000 ಮನೆಗಳಿದ್ದು, ಇಲ್ಲಿ ಪ್ರತ್ಯೇಕ ಮೆಸ್ಕಾಂ ಶಾಖಾ ಕಚೇರಿಯನ್ನು ಸ್ಥಾಪಿಸಬೇಕು. ಇದರಿಂದ ಈ ಭಾಗದ ವಿದ್ಯುತ್ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ನೇಜಾರು ಕಚೇರಿಯಲ್ಲಿ ಕೇವಲ ನಾಲ್ಕೈದು ಸಿಬ್ಬಂದಿಗಳಿದ್ದಾರೆ. ಸರಿಯಾದ ಅನುಭವ ಇಲ್ಲದ ಹೊರಗಿನ ಲೈನ್‌ಮೆನ್‌ಗಳನ್ನು ಇಲ್ಲಿ ತಂದು ಹಾಕಿದ್ದಾರೆ. ಇಲ್ಲಿಗೆ ಸ್ಥಳೀಯ ಲೈನ್‌ಮೆನ್‌ಗಳನ್ನು ನಿಯೋಜಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಇಬ್ಬರು ಅನುಭವಿ ಲೈನ್‌ಮೆನ್‌ಗಳನ್ನು ಇಲ್ಲಿಂದ ತೆಗೆದು ಬೇರೆ ಕಡೆ ಹಾಕಿ ದ್ದಾರೆ. ಹೊಸ ಲೈನ್‌ಮೆನ್‌ಗಳಿಗೆ ಗ್ರಾಮದ ಊರಿನ ಪರಿಚಯ ಇಲ್ಲ. ಗಾಳಿ ಮಳೆ ಬಂದಾಗ ಎಲ್ಲಿ ಟ್ರೀಪ್ ಆಗುತ್ತಿದೆ ಎಂಬುದು ಅವರಿಗೆ ಗೊತ್ತೇ ಇಲ್ಲ. ಆದುದರಿಂದ ಈ ಹಿಂದೆ ಇದ್ದ ಲೈನ್‌ಮೆನ್‌ಗಳಲ್ಲಿ ಒಬ್ಬರನ್ನು ಮತ್ತೆ ನೇಜಾರಿಗೆ ನಿಯೋಜಿಸಬೇಕು. ಇದರಿಂದ ಸಮಸ್ಯೆ ಬಗೆಹರಿಸಬಹುದು’ ಎಂದು ಗ್ರಾಪಂ ಸದಸ್ಯ ನಿತ್ಯಾನಂದ ಕೆಮ್ಮಣ್ಣು ತಿಳಿಸಿದ್ದಾರೆ.







