ಮೃತ್ಯುವಿನ ಬಾಗಿಲು ತಟ್ಟಿ ಬಂದ ರಾಜಶೇಖರ್ ವಿಶ್ವದ ಅತ್ಯಂತ ಎತ್ತರದ ಯುದ್ಧರಂಗಕ್ಕೆ ನಿಯೋಜನೆ
ಈ ಛಲದಂಕ ಮಲ್ಲನಿಗೆ ಈತನೇ ಸಾಟಿ

ಡೆಹ್ರಾಡೂನ್, ಜೂ. 11: ಡೆಹ್ರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡಮಿಯಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿ ವಿಶ್ವದ ಅತ್ಯಂತ ಎತ್ತರದ ಯುದ್ಧರಂಗವೆಂದೇ ಪರಿಗಣಿಸಲಾದ ಸಿಯಾಚಿನ್ ನಲ್ಲಿ ಅಸ್ಸಾಂ ರೈಫಲ್ಸ್ ನಲ್ಲಿ ಲೆಫ್ಟಿನೆಂಟ್ ಆಗಿ 27 ವರ್ಷದ ಜಂಟಲ್ ಮ್ಯಾನ್ ಕೆಡೆಟ್ (ಜಿಸಿ) ರಾಜಶೇಖರ್ ನೇಮಕಗೊಂಡಾಗ ಅದು ಪವಾಡವಲ್ಲದೆ ಮತ್ತಿನ್ನೇನಾಗಿರಲಿಲ್ಲ.
ಕೆಲ ಸಮಯದ ಹಿಂದೆಯಷ್ಟೇ ಡೆಹ್ರಾಡೂನ್ ನ ಮಿಲಿಟರಿ ಆಸ್ಪತ್ರೆಯ ವೈದ್ಯರು ಅವರು ಬದುಕುಳಿಯುವ ಸಾಧ್ಯತೆಯಿಲ್ಲ ಎಂದಿದ್ದರು. ಅಕಾಡಮಿಯಲ್ಲಿ ನಿಯಮಿತವಾಗಿ ನಡೆಯುತ್ತಿದ್ದ ಅಭ್ಯಾಸದ ವೇಳೆ ಕುಸಿದು ಬಿದ್ದಿದ್ದ ರಾಜಶೇಖರ್ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರು.
‘‘ಅಕಾಡಮಿಯಲ್ಲಿ ನಡೆಯುವ ಪೆಹಲಾ ಕದಮ್ ವ್ಯಾಯಾಮದ ಸಂದರ್ಭ ನಾನು ಡಿಹೈಡ್ರೇಶನ್ ನಿಂದಾಗಿ ಕುಸಿದು ಬಿದ್ದೆ. ಈ ವ್ಯಾಯಾಮದಂಗವಾಗಿ ಕೆಡೆಟ್ ಗಳು ತಮ್ಮ ಬೆನ್ನಲ್ಲಿ ಭಾರ ಹೊತ್ತುಕೊಂಡು 10 ಕಿಮೀ ಓಡಬೇಕಿದೆ’’ ಎಂದು ತಮಿಳುನಾಡು ಮೂಲದ ರಾಜಶೇಖರ್ ನೆನಪಿಸಿಕೊಳ್ಳುತ್ತಾರೆ.
ಅವರ ಕಿಡ್ನಿ ಮತ್ತು ಲಿವರ್ ಶೇ 70ರಷ್ಟಿ ಹಾನಿಗೊಂಡಿತ್ತು ಎಂದು ವೈದ್ಯರು ತಿಳಿಸಿದ್ದರಲ್ಲದೆ ಅವರು 40 ದಿನಗಳ ಕಾಲ ಹಾಸಿಗೆ ಹಿಡಿಯುವಂತಾಗಿತ್ತು. ಈ ಸಂದರ್ಭ ಅಕಾಡಮಿಯಲ್ಲಿ ಅವರ ಸಾವಿನ ವದಂತಿಗಳೂ ಹರಿದಾಡಿದ್ದವು. ಅದಾಗಲೇ ಈ ವ್ಯಾಯಾಮ ಮಾಡುವಾಗ ಇಬ್ಬರು ಕೆಡೆಟ್ ಗಳು ಸಾವನ್ನಪ್ಪಿದ್ದರಿಂದ ಈ ವದಂತಿಗಳಿಗೆ ರೆಕ್ಕೆ ಹುಟ್ಟಿಕೊಂಡಿದ್ದವು.
ಆದರೆ ರಾಜಶೇಖರ್ ಪವಾಡಸದೃಶವಾಗಿ ಗುಣಮುಖರಾಗುತ್ತಾ ಬಂದರೂ ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿರಿಸಿ ಕೋರ್ಸ್ ಕೈಬಿಡುವಂತೆ ವೈದ್ಯರು ಸಲಹೆ ನೀಡಿದ್ದರು. ರಾಜಶೇಖರ್ ತಾಯಿ ಮತ್ತು ಸೋದರ ಕೂಡ ಇದೇ ಸಲಹೆ ನೀಡಿದ್ದರು.
ಆದರೆ ರಾಜಶೇಖರ್ ಅಷ್ಟೊಂದು ಸುಲಭದಲ್ಲಿ ಇದಕ್ಕೆ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಪ್ರತಿ ದಿನ ಜಿಮ್ ನಲ್ಲಿ ನಾಲ್ಕು ಗಂಟೆಗಳ ಕಾಲ ವ್ಯಾಯಾಮ ಮಾಡಲಾರಂಭಿಸಿದ್ದರಲ್ಲದೆ ಇದರ ಫಲವಾಗಿ ಮತ್ತೆ ತಮ್ಮ ಕೋರ್ಸ್ ಪೂರೈಸುವಷ್ಟು ದೈಹಿಕ ಕ್ಷಮತೆ ಪಡೆದರು. ಪಾಸಿಂಗ್ ಔಟ್ ಪೆರೇಡ್ ನಲ್ಲಿ ಬೆಸ್ಟ್ ಮೋಟಿವೇಟರ್ ಅವಾರ್ಡ್ ಕೂಡ ಅವರ ಆತ್ಮಬಲಕ್ಕೆ ಮನ್ನಣೆಯಾಗಿ ದೊರೆಯಿತು.
ತಮಿಳುನಾಡಿನ ಮಧುರೈ ಜಿಲ್ಲೆಯ ಮೈದಾನ್ ಬತ್ತಿ ಎಂಬ ಸಣ್ಣ ಗ್ರಾಮದವರಾಗಿರುವ ರಾಜಶೇಖರ್ ಹತ್ತನೇ ತರಗತಿಯಲ್ಲಿರುವಾಗಲೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು, ನಂತರ ಅವರ ತಾಯಿ ಟೈಲರಿಂಗ್ ಮಾಡಿ ರಾಜಶೇಖರ್ ಮತ್ತು ಅವರ ಸೋದರನ ಶಿಕ್ಷಣ ಮುಂದುವರಿಯುವಂತೆ ನೋಡಿಕೊಂಡಿದ್ದರು. ಸದಾ ಕಷ್ಟದಲ್ಲಿಯೇ ಬೆಳೆದ ರಾಜಶೇಖರ್ ಅವರ ಅಪಾರ ಮನೋಬಲ ಮತ್ತು ಆತ್ಮವಿಶ್ವಾಸವೇ ಅವರನ್ನು ಇಂದಿನ ಸ್ಥಿತಿ ತನಕ ಕೊಂಡೊಯ್ದಿದೆ. ಸಿಯಾಚಿನ್ ನಲ್ಲಿನ ಅವರ ಮೊದಲ ಪೋಸ್ಟಿಂಗ್ ಬಗ್ಗೆ ಕೇಳಿದಾಗ ತಾವು ಅನುಭವಿಸಿದ ಕಷ್ಟಗಳ ಎದುರು ಅದು ಏನೇನೂ ಅಲ್ಲ ಎಂದು ಅವರು ಹೇಳುತ್ತಾರೆ.







