ಮಂಗಳೂರು: 20 ವರ್ಷಗಳಿಂದ ಉದ್ಯಮಿ ಮುಖೇಶ್ ಹೆಗ್ಡೆ ನೇತೃತ್ವದಲ್ಲಿ ನಿರಂತರ ‘ಇಫ್ತಾರ್ ಕೂಟ’

ಮಂಗಳೂರು, ಜೂ.11: ನಗರದ ಕದ್ರಿ ಶಿವಬಾಗ್‌ನಲ್ಲಿರುವ ಪ್ರಖ್ಯಾತ ‘ಕಾರ್ ಡೆಕೋರ್’ ಸಂಸ್ಥೆಯ ಮಾಲಕ ಮುಖೇಶ್ ಹೆಗ್ಡೆ ಕಳೆದ 20 ವರ್ಷಗಳಿಂದ ‘ಇಫ್ತಾರ್ ಕೂಟ’ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮತೀಯ ಸೂಕ್ಷ್ಮ ಪ್ರದೇಶವಾಗಿ ಮಂಗಳೂರಿನಲ್ಲಿ ಇಂಥದ್ದೊಂದು ‘ಸೌಹಾರ್ದ ಇಫ್ತಾರ್ ಕೂಟ’ದ ಬಗ್ಗೆ ಹಿಂದೂ- ಮುಸ್ಲಿಂ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ರಮಝಾನ್‌ನ 2 ಅಥವಾ 3ನೆ ರವಿವಾರ ಇಫ್ತಾರ್ ಕೂಟವನ್ನು ಆಯೋಜಿಸುವ ಮುಖೇಶ್ ಈ ಬಾರಿಯ ಇಫ್ತಾರ್ ಕೂಟವನ್ನು ಜೂ.10ರ ರವಿವಾರ ಏರ್ಪಡಿಸಿದ್ದರು. ಸುಮಾರು 100ಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದು, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ರಮಝಾನ್ ಹಾಗೂ ಇಫ್ತಾರ್ ಕೂಟದ ಸಂದೇಶ ನೀಡಿದರು.
ಉಪವಾಸಿಗರೂ ಕೂಡಾ ಉತ್ಸಾಹದಿಂದಲೇ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದು, ಮುಖೇಶ್ ಹೆಗ್ಡೆ ಮತ್ತವರ ಪತ್ನಿ-ಮಕ್ಕಳ ಆದರದ ಸ್ವಾಗತಕ್ಕೆ ಮನ ಸೋತಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಮತಾಂಧರು ದ್ವೇಷ ಕಾರುವುದನ್ನು ತಡೆಯಲು ಮಂಗಳೂರಿನಲ್ಲಿ ಇಂತಹ ಸೌಹಾರ್ದ ಕಾರ್ಯಕ್ರಮವು ಹಿಂದೂ-ಮುಸ್ಲಿಂ ವಲಯದಲ್ಲಿ ಸದಾ ನಡೆಯುತ್ತಲೇ ಇರಬೇಕು ಎಂದು ಆಶಿಸಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮುಖೇಶ್ ಹೆಗ್ಡೆ ‘ನಾನು ಪ್ರಚಾರಕ್ಕೋಸ್ಕರ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿಲ್ಲ. ಗ್ರಾಹಕರನ್ನು ಸೆಳೆಯುವುದಕ್ಕೋಸ್ಕರವೂ ಮಾಡುತ್ತಿಲ್ಲ. ನನಗೆ ಹಿಂದೂ-ಮುಸ್ಲಿಂ-ಕ್ರೈಸ್ತ ಸಮುದಾಯದ ಸಾಕಷ್ಟು ಮಂದಿ ಗೆಳೆಯರಿದ್ದಾರೆ, ಹಿತೈಷಿಗಳಿದ್ದಾರೆ. ಅವರೊಂದಿಗೆ ಒಂದು ಸಂತಸದ ಕ್ಷಣವನ್ನು ಕಳೆಯಲು ಇದಕ್ಕಿಂತ ಒಳ್ಳೆಯ ಅವಕಾಶ ಬೇರೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಮನೆಯವರೊಂದಿಗೆ ಸೇರಿಕೊಂಡು ಅತ್ಯಂತ ಖುಷಿಯಿಂದಲೇ ಇಫ್ತಾರ್ ಕೂಟ ಆಯೋಜಿಸುತ್ತಿದ್ದೇನೆ. ಮುಂದೆಯೂ ಇದು ನಿರಂತರವಾಗಲಿದೆ’ ಎಂದರು.
‘1998ರಲ್ಲಿ ‘ಕಾರ್ ಡೆಕೋರ್’ನ ಮಳಿಗೆಯು ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನಲ್ಲಿತ್ತು. ಉಪವಾಸಿಗರನ್ನು ಹತ್ತಿರದಿಂದ ಗಮನಿಸುತ್ತಿದ್ದ ನನಗೆ ಅಲ್ಲಿ ಪ್ರತೀ ದಿನ ನಡೆಯುವ ಇಫ್ತಾರ್ ಕೂಟ ಹೆಚ್ಚು ಆಕರ್ಷಿಸಲ್ಪಟ್ಟಿತು. ಅದರಂತೆ ನಾನೂ ಕೂಡ ಪ್ರತೀ ರಮಝಾನ್‌ನಲ್ಲೊಮ್ಮೆ ಇಫ್ತಾರ್ ಕೂಟ ಆಯೋಜಿಸಲು ತೀರ್ಮಾನಿಸಿದೆ. ಹಾಗೇ ಸಾಯಿಬೀನ್ ಕಾಂಪ್ಲೆಕ್ಸ್‌ನ ಮಾಲಕರ, ಇತರ ಮಳಿಗೆಯ ಮಾಲಕರು, ಸಿಬ್ಬಂದಿ ವರ್ಗದ ಸಹಕಾರದಿಂದ ಇಫ್ತಾರ್ ಕೂಟ ಆಯೋಜಿಸಿದೆ. ಆರಂಭದಲ್ಲಿ 300-400 ಮಂದಿ ಪಾಲ್ಗೊಳ್ಳುತ್ತಿದ್ದರು. 8 ವರ್ಷದಿಂದ ನಾನು ಕದ್ರಿ ಶಿವಬಾಗ್‌ನಲ್ಲಿರುವ ನನ್ನದೇ ಸ್ವಂತ ಕಟ್ಟದಲ್ಲಿ 2 ಅಥವಾ 3ನೆ ರವಿವಾರ ಇಫ್ತಾರ್ ಕೂಟ ಆಯೋಜಿಸುತ್ತಿದ್ದೇನೆ. ಸುಮಾರು 100-150 ಮಂದಿ ಪಾಲ್ಗೊಳ್ಳುತ್ತಾರೆ. ನಿನ್ನೆಯೂ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಮುಖೇಶ್ ಹೆಗ್ಡೆ ಹೇಳಿದರು.
ನಮಾಝಿಗೂ ವ್ಯವಸ್ಥೆ:- ನಮ್ಮದು ‘ಇಫ್ತಾರ್ ಕೂಟ’ಕ್ಕೆ ಮಾತ್ರ ಸೀಮಿತವಲ್ಲ, ಬಳಿಕದ ನಮಾಝ್‌ಗೂ ವ್ಯವಸ್ಥೆ ಮಾಡಿಕೊಡುತ್ತೇವೆ. ಅದಕ್ಕಾಗಿ ಕಾರ್ಪೆಟ್ ಅಳವಡಿಸಿ ಉಪವಾಸಿಗರಿಗೆ ಯಾವುದೇ ಸಮಸ್ಯೆಯಾದಂತೆ ನೋಡಿಕೊಳ್ಳುತ್ತೇವೆ. ನಮ್ಮ ಆಹ್ವಾನ ಮನ್ನಿಸಿ ಆಗಮಿಸುವ ಪ್ರತಿಯೊಬ್ಬರನ್ನೂ ನಾನೂ, ನನ್ನ ಹೆಂಡತಿ-ಮಕ್ಕಳು ಪ್ರೀತಿಯಿಂದಲೇ ಸ್ವಾಗತಿಸುತ್ತೇವೆ. ಆವಾಗ ನಮಗೆ ಆಗುವ ಸಂತೋಷ ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.
ಹಿಂದೂ-ಕ್ರೈಸ್ತರೂ ಕೂಡಾ: ಇದೊಂದು ಸೌಹಾರ್ದ ಇಫ್ತಾರ್ ಕೂಟ. ಹಾಗಾಗಿ ಮುಸ್ಲಿಮರಲ್ಲದೆ ನನ್ನ ಹಿಂದೂ-ಕ್ರೈಸ್ತ ಹಿತೈಷಿಗಳೂ ಕೂಡ ಅತ್ಯಂತ ಖುಷಿಯಿಂದಲೇ ಭಾಗವಹಿಸುತ್ತಾರೆ. ಅವರಿಗೆ ಅರ್ಥವಾಗಿಸುವ ಸಲುವಾಗಿ ಅಬ್ದುರ್ರವೂಫ್ ಪುತ್ತಿಗೆ ರಮಝಾನ್-ಇಫ್ತಾರ್‌ನ ಸಂದೇಶವನ್ನು ತುಳುವಿನಲ್ಲೂ ಹೇಳುವುದುಂಟು. ಹೀಗೆ ನಮ್ಮಲ್ಲಿ ಧಾರ್ಮಿಕ ಸೌಹಾರ್ದವಲ್ಲದೆ, ಭಾಷಾ ಸೌಹಾರ್ದವೂ ಇದೆ.
ಝಕಾತ್ ಕೊಟ್ಟರೆ ಬಡತನವೇ ಇಲ್ಲ: ಇಸ್ಲಾಮ್ ಧರ್ಮವು ಝಕಾತ್‌ಗೆ ಆದ್ಯತೆ ನೀಡಿದೆ. ಬಹುಶಃ ನನಗೆ ತಿಳಿದ ಮಟ್ಟಿಗೆ ಆರ್ಥಿಕ ಸಮತೋಲನ ಕಾಪಾಡಲು ಝಕಾತ್‌ನಂತಹ ವ್ಯವಸ್ಥೆ ಬೇರೆ ಇಲ್ಲ ಎಂದರೆ ತಪ್ಪಾಗಲಾರದು. ಶ್ರೀಮಂತನು ಅರ್ಹರಿಗೆ ವರ್ಷಕ್ಕೊಮ್ಮೆ ಝಕಾತ್ ನೀಡುವುದನ್ನು ಕಡ್ಡಾಯಗೊಳಿಸಬೇಕು. ಹೀಗೆ ಮಾಡಿದರೆ ಮುಂದೊಂದು ಬಡತನೇ ಇರಲಾರದು. ಅಲ್ಲದೆ ಸರಕಾರ ತೆರಿಗೆ ಹಾಕುವ ಪ್ರಮೇಯವೂ ಬರುವುದಿಲ್ಲ.







