ಮಲೆನಾಡಿನಲ್ಲಿ ನಿಲ್ಲದ ಮಳೆ: ಕಳಸ- ಹೊರನಾಡು ಸಂಪರ್ಕ ಸೇತುವೆ ಮುಳುಗಡೆ

ಹೊರನಾಡು ಹೆಬ್ಬಾಳೆ ಎಂಬಲ್ಲಿ ಭದ್ರಾ ನದಿಗೆ ಕಟ್ಟಿರುವ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದರೂ ವಾಹನ ಸವಾರರು ಸೇತುವೆ ದಾಟಿಸುತ್ತಿರುವುದು.
ಚಿಕ್ಕಮಗಳೂರು, ಜೂ.11: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಸತತ ನಾಲ್ಕನೆ ದಿನವೂ ಮುಂದುವರಿದಿದ್ದು, ಬಯಲುಸೀಮೆ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದರೆ ಮಲೆನಾಡಿನಾದ್ಯಂತ ಮಳೆ ಬಿರುಸುಗೊಂಡಿದೆ. ಸತತ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಕಳಸ ಪಟ್ಟದಕ್ಕೆ ಹೊಂದಿಕೊಂಡಿರುವ ಕಳಸ-ಹೊರನಾಡು ಸಂಪರ್ಕದ ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ.
ಹೋಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದ್ದು, ಸತತ ಮಳೆಯಿಂದಾಗಿ ಸೋಮವಾರ ಭದ್ರಾ ನದಿಯು ಗರಿಷ್ಠ ಪ್ರಮಾಣದಲ್ಲಿ ತುಂಬಿ ಹರಿಯಲಾರಂಬಿಸಿದೆ. ಮೂಡಿಗೆರೆ ತಾಲೂಕಿನ ಕುದುರೆಮುಖ,ಜಾಂಬ್ಲೆ,ನೆಲ್ಲಿಬೀಡು ಪ್ರದೇಶಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ನದಿ,ಹಳ್ಳ,ತೊರೆಗಳು ಮೈದುಂಬಿ ಹರಿಯಲಾರಂಬಿಸಿದೆ. ಭದ್ರಾ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು. ಇದರಿಂದ ಹೊರನಾಡು,ಬಲಿಗೆ,ಚಿಕ್ಕನಕುಡಿಗೆ,ಮಾವಿನಹೊಲ,ಮಣ್ಣಿನಪಾಲ್ ಕಡೆ ಹೋಗುವ ಗ್ರಾಮಸ್ಥರು ತೊಂದರೆ ಅನುಭವಿಸಿದರು.ಹೊರನಾಡಿಗೆ ಬಂದ ಪ್ರವಾಸಿಗರು ಒಂದೆರಡು ಗಂಟೆ ಸೇತುವೆ ಬುಡದಲ್ಲಿ ಕಾಯುವಂತಾಯಿತು.ಕೆಲ ಪ್ರಯಾಣಿಕರು ಹೊರನಾಡಿಗೆ ಹೋಗುವ ಹಳುವಳ್ಳಿ ಬದಲಿ ಮಾರ್ಗದಲ್ಲಿ ತೆರಳಿದರು.
ಸಂಸೆಯ ಸೋಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯಲಾರಂಬಿಸಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡವು.ಸಂಸೆ ಮುಖ್ಯ ರಸ್ತೆಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೆ ಮೂರು ಮನೆಗಳಿಗೆ ನೀರು ನುಗ್ಗಿತು. ಮುಖ್ಯ ರಸ್ತೆಯಲ್ಲಿ ಒಂದೆರಡು ಅಡಿಗಳಷ್ಟು ನೀರು ತುಂಬಿ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಇನ್ನು ಶೃಂಗೇರಿ ತಾಲೂಕಿನಾದ್ಯಂತ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಭಾಗದಲ್ಲಿ ಹರಿಯುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆಯಾದರೂ ಆಸ್ತಿಪಾಸ್ತಿಗೆ ನಷ್ಟವಾದ ಬಗ್ಗೆ ವರದಿಯಾಗಿಲ್ಲ. ಬಾರೀ ಮಳೆ ಹಿನ್ನೆಲೆಯಲ್ಲಿ ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಕೈ ಕೊಟ್ಟಿದೆ.
ಬಯಲು ಸೀಮೆ ತಾಲೂಕುಗಳಾದ ತರೀಕೆರೆ ಹಾಗೂ ಕಡೂರು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಈ ಭಾಗದಲ್ಲಿರುವ ಭದ್ರಾ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಿದೆ.
ಹುಚ್ಚು ಸಾಹಸ ಮೆರೆದ ಪ್ರಯಾಣಿಕರು: ಕಳಸ-ಹೊರನಾಡು ಸಂಪರ್ಕ ಹೆಬ್ಬಾಳೆ ಸೇತುವೆ ಮುಳುಗಡೆಯಾಗುತ್ತಿದ್ದಂತೆ ಪ್ರವಾಸಿಗರು, ಖಾಸಗಿ ಬಸ್ಸು,ಸರ್ಕಾರಿ ಬಸ್ಸು,ಇತರೆ ವಾಹನಗಳು ಸೇತುವೆ ದಾಟಿಸಿ ಹುಚ್ಚು ಸಹಾಸ ಮೆರೆದರು. ಸೇತುವೆಯಿಂದ ಸುಮಾರು ಒಂದೂವರೆ ಅಡಿಗಳಷ್ಟು ಎತ್ತರದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದರೂ ಕೂಡ ತುಂಬಿದ ಪ್ರಯಾಣಿಕರೊಂದಿಗೆ ಸೇತುವೆಯ ಮೇಲೆ ದಾಟಿಸಿದರು. ಸ್ಥಳೀಯರು ಇಂತ ಅಪಾಯಕಾರಿ ಸೇತುವೆಯ ಮೇಲೆ ವಾಹನ ದಾಟಿಸಬೇಡಿ ಎಂದು ಹೇಳಿದರೂ ಕೂಡ ಪ್ರವಾಸಿಗರು ಸ್ಥಳೀಯರ ಮಾತಿಗೆ ಬೆಲೆ ನೀಡಲಿಲ್ಲ.







