ಸಂವಿಧಾನದ ಉಳಿವಿಗೆ ಹೋರಾಟ ಅನಿವಾರ್ಯ: ಎನ್‌ಎಫ್‌ಐಡಬ್ಲೂ ಅಧ್ಯಕ್ಷೆ ಜ್ಯೋತಿ

ಬೆಂಗಳೂರು, ಜೂ. 11: ಮಹಿಳೆಯರಿಗೆ ಆಸ್ತಿ ಹಕ್ಕು ನೀಡಿದ್ದ ಡಾ.ಅಂಬೇಡ್ಕರ್ ಅವರ ಹಿಂದೂ ಕೋಡ್ ಬಿಲ್‌ನ್ನು ಪ್ರಬಲವಾಗಿ ವಿರೋಧಿಸಿದ್ದ ಆರೆಸೆಸ್ಸ್, ಬಿಜೆಪಿ ಮುಖವಾಡದಲ್ಲಿಂದು ಅಧಿಕಾರ ನಡೆಸುತ್ತಿದ್ದು, ಸಂವಿಧಾನವನ್ನು ಅಪಾಯದಲ್ಲಿಟ್ಟಿದೆ. ಅದನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಭಾರತೀಯ ಮಹಿಳಾ ಒಕ್ಕೂಟದ(ಎನ್‌ಎಫ್‌ಐಡಬ್ಲೂ) ಅಧ್ಯಕ್ಷೆ ಜ್ಯೋತಿ ಹೇಳಿದ್ದಾರೆ.
ಸೋಮವಾರ ನಗರದ ಘಾಟೆ ಭವನದಲ್ಲಿ ಒಕ್ಕೂಟದ 65ನೆ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರ ಉದ್ಯೋಗ, ಆಸ್ತಿ, ಶಿಕ್ಷಣ, ವೈಯಕ್ತಿಕ ಕಾನೂನು, ವಿಶ್ವಶಾಂತಿ, ಕೋಮು ಸೌಹಾರ್ದತೆ, ಮಹಿಳೆಯರ ಘನತೆ ಮತ್ತು ಸಮ ಸಮಾಜಕ್ಕಾಗಿ ಒಕ್ಕೂಟ ಹೋರಾಟ ನಡೆಸಿದೆ.
ಆದರೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವೌಲ್ಯಗಳಿಗೆ ಅಪಾಯ ಎದುರಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಬೇಕು. ಜತೆಗೆ ಶಾಸಕಾಂಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಜಾರಿಗೆ ಆಗ್ರಹಿಸಬೇಕು ಎಂದು ಕರೆ ನೀಡಿದರು.
ಸಸಿ ನೆಡುವ ಮೂಲಕ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕಿ ಡಾ.ವಿ.ಡಿ.ಸುವರ್ಣ, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವಚಿತ್ರಣ, ಸ್ವಗೌರವ ಮತ್ತು ಸ್ವ ಆದರ್ಶಗಳನ್ನು ರೂಢಿಸಿಕೊಂಡರೆ ಸಂಕಷ್ಟದ ಸಂದರ್ಭದಲ್ಲಿ ಬದಕಿನ ಹಾದಿ ಸುಗಮಗೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಡಿ.ಹರಿಗೋವಿಂದ್, ಬಾಡದ ವೀರಣ್ಣ, ಮುಖಂಡರಾದ ಸುಂದರಮ್ಮ, ಮಾಲಾ, ಮಲ್ಲಮ್ಮ, ಮಂಗಳ, ಯಶೋಧಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







