ಕ್ಯಾಂಟರ್ ಢಿಕ್ಕಿ : ಬೈಕ್ ಸವಾರ ಮೃತ್ಯು

ಬೆಂಗಳೂರು, ಜೂ.11: ಶರವೇಗದಲ್ಲಿ ಬಂದ ಕ್ಯಾಂಟರ್, ಬೈಕ್‌ಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕೆಂಗೇರಿ ಬಾಪೂಜಿ ಕಾಲನಿಯ ವಿದ್ಯಾಪೀಠ ರಸ್ತೆ ನಿವಾಸಿ ವಿ.ಅಶೋಕ್ ಮೃತಪಟ್ಟ ಬೈಕ್ ಸವಾರ ಎಂದು ಪೊಲೀಸರು ಗುರುತಿಸಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಇಲ್ಲಿನ ಕೆಂಗೇರಿ ಸಮೀಪದ ಉಪನಗರದ ಸುರಾನಾ ಕಾಲೇಜು ಸಮೀಪ ಅಶೋಕ್ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅತಿವೇಗವಾಗಿ ಮುನ್ನುಗ್ಗಿದ ಕ್ಯಾಂಟರ್ ಇವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅಶೋಕ್ ಗಂಭೀರ ಗಾಯಗೊಂಡರು ಎನ್ನಲಾಗಿದೆ.
ಸ್ಥಳೀಯರ ಸಹಾಯದಿಂದ ಅಶೋಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





