ಲೋಕಸಭೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆಂದ ಅರವಿಂದ್ ಕೇಜ್ರಿವಾಲ್!
ತಿಪ್ಪರಲಾಗ ಹೊಡೆದ ಆಪ್ ನಾಯಕ

ಹೊಸದಿಲ್ಲಿ, ಜೂ.11: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರಕಾರವು ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಿದರೆ ಆಮ್ ಆದ್ಮಿ ಪಕ್ಷದ ಪ್ರತಿಯೊಂದು ಮತವೂ ಬಿಜೆಪಿಗೆ ಬೀಳುತ್ತದೆ ಎಂದು ನಿಶ್ಚಿತವಾಗಿ ಹೇಳುತ್ತೇನೆಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“2019ರ ಚುನಾವಣೆಗೆ ಮೊದಲು ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಸಿಕ್ಕರೆ, ದಿಲ್ಲಿಯ ಪ್ರತಿಯೊಂದು ಮತವೂ ನಿಮಗೇ ಬೀಳುತ್ತದೆ ಎಂದು ನಾನು ಬಿಜೆಪಿಗೆ ಹೇಳಲು ಇಚ್ಛಿಸುತ್ತೇನೆ. ನಾವು ನಿಮಗಾಗಿ ಪ್ರಚಾರ ಮಾಡುತ್ತೇವೆ. ಆದರೆ ಇದನ್ನು ನೀವು ಮಾಡದೇ ಇದ್ದಲ್ಲಿ ಪ್ರತಿಯೊಬ್ಬ ದಿಲ್ಲಿ ನಿವಾಸಿ ‘ಬಿಜೆಪಿ ದಿಲ್ಲಿ ಬಿಟ್ಟು ತೊಲಗಲಿ” ಎನ್ನುವ ಬೋರ್ಡ್ ಹಾಕುತ್ತಾರೆ” ಎಂದವರು ವಿಧಾನಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ರವಿವಾರದಿಂದಲೇ ಕೇಜ್ರಿವಾಲ್ ಹಾಗು ಆಪ್ ಕಾರ್ಯಕರ್ತರು, “ಉಪರಾಜ್ಯಪಾಲರೇ ದಿಲ್ಲಿ ಬಿಟ್ಟು ತೊಲಗಿ” ಎನ್ನುವ ಘೋಷಣೆಯನ್ನು ಆರಂಭಿಸಿದ್ದಾರೆ. ಸಂಪೂರ್ಣ ರಾಜ್ಯ ಸ್ಥಾನಮಾನಕ್ಕಾಗಿ ದಿಲ್ಲಿಯಾದ್ಯಂತ ಹೋರಾಟ ನಡೆಯಲಿದೆ ಎಂದೂ ಆಪ್ ಘೋಷಿಸಿತ್ತು.





