15 ಕೈಗಾರಿಕೋದ್ಯಮಿಗಳ 2.5 ಲಕ್ಷ ಕೋ.ರೂ. ಸಾಲಮನ್ನಾ ಮಾಡಿದ ಮೋದಿ ಸರಕಾರ
ರಾಹುಲ್ ವಾಗ್ದಾಳಿ

ಹೊಸದಿಲ್ಲಿ,ಜೂ.11: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೋಮವಾರ ತೀವ್ರ ದಾಳಿಯನ್ನು ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ಮೋದಿ ಸರಕಾರವು ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿದೆ,ಆದರೆ ಸುಮಾರು 2.5 ಲ.ಕೋ.ರೂ.ಮೊತ್ತದ ಸಾಲಗಳನ್ನು ಮನ್ನಾ ಮಾಡುವ ಮೂಲಕ 15 ಕೈಗಾರಿಕೋದ್ಯಮಿಗಳ ಸಣ್ಣ ಗುಂಪೊಂದಕ್ಕೆ ನೆರವಾಗಿದೆ. ರೈತರಿಗೆ ಸಿಕ್ಕಿದ್ದು ಸೊನ್ನೆ. ಅವರ ಆತ್ಮಹತ್ಯೆಗಳು ಮುಂದುವರಿದಿವೆ ಮತ್ತು ಅವರ ಮಕ್ಕಳು ಗೋಳಾಡುತ್ತಲೇ ಇದ್ದಾರೆ ಎಂದು ಆರೋಪಿಸಿದರು.
ಪಕ್ಷದ ಒಬಿಸಿ ವಿಭಾಗದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ತೆರೆಯ ಹಿಂದೆ ಕಠಿಣವಾಗಿ ಪರಿಶ್ರಮಿಸುವವರಿಗೆ ಎಂದಿಗೂ ಲಾಭವಾಗಿಲ್ಲ ಮತ್ತು ಅವರ ಪರಿಶ್ರಮದ ಫಲವನ್ನು ಇತರರು ಉಣ್ಣುತ್ತಿದ್ದಾರೆ ಎಂದರು.
ಕೌಶಲ್ಯವಿರುವವರಿಗೆ ಭಾರತದಲ್ಲಿ ಪುರಸ್ಕಾರವಿಲ್ಲ. ರೈತರು ಕಠಿಣವಾಗಿ ಶ್ರಮಿಸುತ್ತಾರೆ,ಆದರೆ ಅವರು ನಿಮಗೆ ಮೋದಿಯವರ ಕಚೇರಿಯಲ್ಲಿ ಕಂಡು ಬರುವುದಿಲ್ಲ ಎಂದರು.
ಭಾರತದಲ್ಲಿ ಕೌಶಲ್ಯದ ಕೊರತೆಯಿದೆ ಎಂಬ ಸರಕಾರದ ನಿಲುವನ್ನು ಪ್ರಶ್ನಿಸಿದ ಅವರು,ಇದು ನಿಜವಲ್ಲ,ವಾಸ್ತವವನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.





