ಚಿಕ್ಕಮಗಳೂರು; ಸರಣಿ ಅಪಘಾತ : ಮೂವರಿಗೆ ಗಾಯ

ಚಿಕ್ಕಮಗಳೂರು, ಜೂ.11: ಭಾರೀ ಮಳೆ ಹಾಗೂ ಮಂಜು ಮುಸುಕಿದ್ದ ಪರಿಣಾಮ ರಸ್ತೆ ಸರಿಯಾಗಿ ಕಾಣದೇ ಎದುರಿನಿಂದ ಬಂದ ಲಾರಿಗೆ ಢಿಕ್ಕಿ ಹೊಡೆದು ಕೆಟ್ಟು ನಿಂತಿದ್ದ ಕಾರಿಗೆ ವೇಗವಾಗಿ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದ ಘಟನೆ ಆಲ್ದೂರು ಠಾಣಾ ವ್ಯಾಪ್ತಿಯಲ್ಲಿನ ಬರ್ಗಲ್ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಕಾರಿನೊಳಗೆ ಸಿಲುಕಿಕೊಂಡ ಚಾಲಕನನ್ನು ಸಾರ್ವಜನಿಕರು ಮತ್ತು ಪೊಲೀಸರು ಹರಸಾಹಪಟ್ಟು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಕಡೆಯಿಂದ ಮೂಡಿಗೆರೆಯತ್ತ ಬರುತ್ತಿದ್ದ ಲಾರಿಗೆ ಹಾಂದಿ ಸಮೀಪದ ಬರ್ಗಲ್ ಎಂಬಲ್ಲಿ ಆಲ್ಟೋ ಕಾರು ಢಿಕ್ಕಿಯಾಗಿದ್ದು, ಈ ಅಪಘಾತದಲ್ಲಿ ಕಾರು ಮತ್ತು ಲಾರಿಗಳ ಮುಂಭಾಗ ಜಖಂಗೊಂಡಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಘಟನೆ ಸಂಭವಿಸಿ ಕೆಲವೇ ಹೊತ್ತಿನಲ್ಲಿ ಅದೇ ಮಾರ್ಗದಲ್ಲಿ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಸಫಾರಿ ಕಾರು ಕೆಟ್ಟು ನಿಂತಿದ್ದ ಆಲ್ಟೋ ಕಾರಿಗೆ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಢಿಕ್ಕಿ ಹೊಡೆದ ರಭಸಕ್ಕೆ ಸಫಾರಿ ಕಾರಿನ ಮುಂಬಾಗ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಗೌಸ್, ಶಬಾನಾ ಹಾಗೂ ಶಫಿ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಚಾಲಕ ಸರ್ದಾರ್ ಎಂಬವರ ಎರಡೂ ಕಾಲು ಕಾರಿನ ಸ್ಟೇರಿಂಗ್‍ನ ಕೆಳಗೆಸಿಲುಕಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಮತ್ತು ಆಲ್ದೂರು ಪೊಲೀಸರು ಸ್ಥಳಕ್ಕೆ ಬಂದು ಕೂಡಲೇ ಗಾಯಾಳುಗಳನ್ನು ಚಿಕ್ಕಮಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳು ಚಿಕ್ಕಮಗಳೂರಿನ ಗಾಂಧಿನಗರದ ನಿವಾಸಿಗಳೆಂದು ತಿಳಿದು ಬಂದಿದ್ದು, ಗೌಸ್ ತಮ್ಮ ಮಗಳು ಶಬಾನಾರನ್ನು ಮಂಗಳೂರಿನ ಕಾಲೇಜಿಗೆ ಸೇರಿಸಿ ಹಿಂದಕ್ಕೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಭಾರೀ ಮಳೆ ಹಾಗೂ ಮಂಜಿನಿಂದಾಗಿ ರಸ್ತೆ ಕಾಣದೇ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಆಲ್ದೂರು ಠಾಣೆಯಲ್ಲಿ ಪ್ರಕಣರ ದಾಖಲಾಗಿದೆ.







