ಜಯನಗರ ಚುನಾವಣೆ ಶಾಂತಿಯುತ : ಶೇ.55 ಮತದಾನ
ಜೂ.13 ರಂದು ಫಲಿತಾಂಶ

ಬೆಂಗಳೂರು, ಜೂ.11: ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಸೋಮವಾರ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ನೆರವೇರಿದ್ದು, ಶೇಕಡ 55 ರಷ್ಟು ಮತ ಚಲಾವಣೆ ಆಗಿದ್ದು, ಜೂ.13ರಂದು ಫಲಿತಾಂಶ ಹೊರ ಬೀಳಲಿದೆ.
ಈ ಕ್ಷೇತ್ರದಲ್ಲಿ 3,12,252 ಮತದಾರಿದ್ದರೂ, ಬರೀ 1,11689 ಜನ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಇದರಲ್ಲಿ 56,865 ಪುರಷರು, 54824 ಮಹಿಳೆಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.
ಜಯನಗರ ವಿಧಾನಸಭಾ ಕ್ಷೇತ್ರದ 216 ಮತಗಟ್ಟೆಗಳಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಯಿತು. 11 ಗಂಟೆ ಸುಮಾರಿಗೆ ಶೇ.22ರಷ್ಟು ಮತದಾನವಾದರೆ, ಮಧ್ಯಾಹ್ನ 1 ಗಂಟೆಗೆ ಶೇ.34 .05, 3ಗಂಟೆಗೆ ಶೇ.43 ಹಾಗೂ ಸಂಜೆ 5 ಗಂಟೆ ಹೊತ್ತಿಗೆ ಶೇ.51 ಮತಚಲಾವಣೆ ಆಗಿದ್ದು, ಎಲ್ಲೆಡೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಜರುಗಿತು.
ಮತ ಚಲಾಯಿಸಿದ ಗಣ್ಯರು: ಸುಶಿಕ್ಷಿತ ಬಡಾವಣೆ ಎಂಬ ಖ್ಯಾತಿಯ ಜಯನಗರದಲ್ಲಿ ಹಲವಾರು ಗಣ್ಯರು ನೆಲೆಸಿದ್ದು, ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಂಡಿ ನೋವು, ಆಯಾಸವಿದ್ದರೂ ಮತ ಚಲಾಯಿಸಿದರು. ನಾಡೋಜ ಬರಗೂರು ರಾಮಚಂದ್ರಪ್ಪ, ಹಿರಿಯ ನಟ ಸುಂದರ್ ರಾಜ್, ಪುತ್ರಿ ನಟಿ ಮೇಘನಾರಾಜ್ ಇಲ್ಲಿನ ಜೆಪಿ ನಗರದ ಎವಿ ಎಜುಕೇಶನ್ ಶಾಲೆ ಬೂತ್ ನಂ 173ರಲ್ಲಿ ಮತ ಚಲಾಯಿಸಿದರು. ಅದೇ ರೀತಿ, ನಟಿ ತಾರಾ ಅನುರಾಧ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆಲ ಅಭ್ಯರ್ಥಿಗಳು ತಮ್ಮ ಹಕ್ಕು ಚಲಾಯಿಸಿದರು.
ವಾಪಸಾದ ಮುಖ್ಯಮಂತ್ರಿ: ನಗರದ ಕ್ಲಾರೆನ್ಸ್ ಪಬ್ಲಿಕ್‌ಸ್ಕೂಲ್ನಲ್ಲಿ ಸ್ಥಾಪಿಸಿದ್ದ ಬೂತ್ ನಂ.216ರ ಇವಿಎಂನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ 1 ಗಂಟೆ ತಡವಾಗಿ ಆರಂಭವಾಯಿತು. ಆದರೆ, ಈ ವೇಳೆಗಾಗಲೇ ಮತ ಚಲಾಯಿಸಲು ಆಗಮಿಸಿದ್ದ ಮುಖ್ಯಮಂತ್ರಿ ಚಂದ್ರು ಅವರು ಇವಿಎಂ ದೋಷದ ಹಿನ್ನೆಲೆಯಲ್ಲಿ ವಾಪಸ್ ತೆರಳಿ 1 ಗಂಟೆ ನಂತರ ಬಂದು ಮತ ಚಲಾಯಿಸುವುದಾಗಿ ತಿಳಿಸಿದರು.
ಪೊಲೀಸ್ ಭದ್ರತೆ: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ 5 ಪಿಂಕ್ ಬೂತ್‌ಗಳು ಸೇರಿದಂತೆ 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಮತಗಟ್ಟೆಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, 10 ಪ್ಯಾರಾಮಿಲಿಟರಿ ಫೋರ್ಸ್ ಹಾಗೂ 350 ಪೊಲೀಸ್ ನಿಯೋಜಿಸಲಾಗಿತ್ತು. ಅದೇ ರೀತಿ, 10 ಸೆಕ್ಟರ್ ಮೊಬೈಲ್ ವ್ಯವಸ್ಥೆ ಮಾಡಲಾಗಿದ್ದು, 216 ಮತಗಟ್ಟೆಗಳಲ್ಲಿ 42 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ನಿಗಾ ವಹಿಸಿದ್ದರು.
ಒಟ್ಟಾರೆ, ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಚುನಾವಣೆ ಗೆದ್ದು ಬೀಗಿರುವ ಕಾಂಗ್ರೆಸ್, ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಜಯನಗರ ವಿಧಾನಸಭೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಪ್ರತಿಪಕ್ಷ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿಯೂ ಪರಿಣಮಿಸಿದ್ದು, ಈ ಕ್ಷೇತ್ರದಲ್ಲಿ ಗೆದ್ದು ತನ್ನ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಲು ತುದಿಗಾಲಿನಲ್ಲಿದೆ.
ಬಿಜೆಪಿಯಿಂದ ವಿಜಯಕುಮಾರ್ ಸಹೋದರ ಬಿ.ಎನ್. ಪ್ರಹ್ಲಾದ್ ಬಾಬು ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ, ಪಕ್ಷೇತರ ರವಿಕೃಷ್ಣಾರೆಡ್ಡಿ ಸೇರಿ 19 ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಬಂಧಿಯಾಗಿದ್ದು, ಜೂ.13ರಂದು ಫಲಿತಾಂಶ ಹೊರಬರಲಿದೆ.
ಮತ ಚಲಾಯಿಸಿದ ಒಟ್ಟು ಮತದಾರರು
► ಚಲಾವಣೆಗೊಂಡ ಒಟ್ಟು ಮತಗಳು: 1,11,689
►ಮಹಿಳೆಯರು-54,824
►ಪುರುಷರು-56,865
ಬುಧವಾರ ಫಲಿತಾಂಶ
ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಬುಧವಾರ(ಜೂ.13) ಹೊರಬರಲಿದೆ. ಇಲ್ಲಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಮತಯಂತ್ರಗಳನ್ನು ಸಂಗ್ರಹಿಸಿಡಲಾಗಿದ್ದು, ಮತ ಎಣಿಕೆ ಬೆಳಗ್ಗೆ 8 ರಿಂದ ಆರಂಭವಾಗಿ, ಮಧ್ಯಾಹ್ನ 12 ಗಂಟೆಯೊಳಗೆ ಸ್ಪಷ್ಟ ಚಿತ್ರಣ ತಿಳಿಯಲಿದೆ.







