ಭಾರತ ಸೇರಿ ಎಲ್ಲ ದೇಶಗಳಿಂದ ಅಮೆರಿಕದ ದರೋಡೆ: ಟ್ರಂಪ್ ಆರೋಪ

ಕ್ಯೂಬೆಕ್ (ಕೆನಡ), ಜೂ. 11: ಜಗತ್ತಿನ ಹಲವು ದೇಶಗಳು ಅಮೆರಿಕವನ್ನು ದೋಚುತ್ತಿವೆ ಹಾಗೂ ಇವುಗಳಲ್ಲಿ ಭಾರತವೂ ಸೇರಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಅಮೆರಿಕದ ವಸ್ತುಗಳ ವಿರುದ್ಧ ಆಮದು ಸುಂಕ ವಿಧಿಸುವ ದೇಶಗಳ ವಿರುದ್ಧ ಹರಿಹಾಯ್ದಿರುವ ಟ್ರಂಪ್, ‘‘ಇದು ಜಿ7 ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಭಾರತವೂ ಇದೆ. ಅಲ್ಲಿ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ. ಆದರೆ ನಾವು ಯಾವುದೇ ಸುಂಕ ವಿಧಿಸುತ್ತಿಲ್ಲ. ನಮಗೆ ಹಾಗೆ ಮಾಡಲು ಆಗುವುದಿಲ್ಲ’’ ಎಂದು ಹೇಳಿದ್ದಾರೆ.
ಇದೇ ಕಾರಣಕ್ಕಾಗಿ ಕೆನಡದ ಕ್ಯೂಬೆಕ್‌ನಲ್ಲಿ ನಡೆದ ಎರಡು ದಿನಗಳ ಜಿ7 ಶೃಂಗ ಸಮ್ಮೇಳನದಿಂದ ಟ್ರಂಪ್ ಅರ್ಧದಲ್ಲೇ ನಿರ್ಗಮಿಸಿದ್ದಾರೆ. ಅಮೆರಿಕದ ಜೊತೆ ನ್ಯಾಯೋಚಿತವಾಗಿ ವ್ಯವಹರಿಸದ ದೇಶಗಳೊಂದಿಗಿನ ವ್ಯಾಪಾರ ವ್ಯವಹಾರವನ್ನು ನಿಲ್ಲಿಸುವ ಬೆದರಿಕೆಯನ್ನೂ ಅವರು ಹಾಕಿದ್ದಾರೆ.
‘‘ನಾವು ಪ್ರತಿಯೊಬ್ಬರೂ ದೋಚುವ ಪಿಗ್ಗಿ ಬ್ಯಾಂಕ್ (ಮಕ್ಕಳ ನಾಣ್ಯ ಸಂಗ್ರಹ ಡಬ್ಬಿ)ನಂತೆ ಆಗಿದ್ದೇವೆ’’ ಎಂದು ಕ್ಯೂಬೆಕ್ ಸಮ್ಮೇಳನದಿಂದ ಅರ್ಧದಲ್ಲೇ ನಿರ್ಗಮಿಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.
‘‘ಹಾಗೆ ಮಾಡಬಾರದು. ನಾವು ಹಲವು ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ಇನ್ನು ಅದು ನಿಲ್ಲಲಿದೆ. ಅಥವಾ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಇದೇ ಅದಕ್ಕೆ ಸರಿಯಾದ ಉತ್ತರ’’ ಎಂದರು.
ಕೆನಡ, ಐರೋಪ್ಯ ಒಕ್ಕೂಟ ಮತ್ತು ಮೆಕ್ಸಿಕೊಗಳಿಂದ ಆಮದು ಮಾಡುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ವಿಧಿಸುವ ಮೂಲಕ ಟ್ರಂಪ್ ತನ್ನ ನಿಕಟ ಮಿತ್ರ ದೇಶಗಳ ಆಕ್ರೋಶಕ್ಕೆ ತುತ್ತಾಗಿರುವುದನ್ನು ಸ್ಮರಿಸಬಹುದಾಗಿದೆ.
ಹಾರ್ಲೆ-ಡೇವಿಡ್‌ಸನ್ ಮೋಟರ್‌ಸೈಕಲ್‌ಗೆ ತೆರಿಗೆಗೆ ಟ್ರಂಪ್ ಆಕ್ಷೇಪ
ಅದೇ ವೇಳೆ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹಾರ್ಲೆ-ಡೇವಿಡ್‌ಸನ್ ಮೋಟರ್‌ಸೈಕಲ್‌ಗಳ ಮೇಲೆ ಆಮದು ಸುಂಕ ವಿಧಿಸುತ್ತಿರುವ ಭಾರತವನ್ನು ಈ ವರ್ಷದ ಆರಂಭದಲ್ಲಿ ಟ್ರಂಪ್ ಟೀಕಿಸಿದ್ದರು.
ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗುತ್ತಿರುವ ಲಕ್ಷಾಂತರ ಭಾರತೀಯ ಮೋಟರ್‌ಸೈಕಲ್‌ಗಳ ಮೇಲೆಯೂ ಇದೇ ಪ್ರಮಾಣದಲ್ಲಿ ಆಮದು ಸುಂಕ ವಿಧಿಸುವುದಾಗಿ ಅವರು ಬೆದರಿಕೆ ಹಾಕಿರುವುದನ್ನು ಸ್ಮರಿಸಬಹುದಾಗಿದೆ.







