ಕೇಂದ್ರದಿಂದ ರಾಜ್ಯಗಳಿಗೆ ಹೆಚ್ಚಿನ ಅನುದಾನ: ನಳಿನ್ ಕುಮಾರ್ ಕಟೀಲ್

ಉಡುಪಿ, ಜೂ.11: ಜಿಎಸ್‌ಟಿ ಜಾರಿಯಾದ ನಂತರ ದೇಶದ ಆರ್ಥಿಕತೆ ಸಧೃಢವಾಗಿದೆ. ಸರ್ಜಿಕಲ್ ಸ್ಟ್ರೈಕ್ ಬಳಿಕ ಭಯೋತ್ಪಾದನೆ ಚಟುವಟಿಕೆಗಳು ಕಾಶ್ಮೀರ ಬಿಟ್ಟು ಹೊರಗೆ ಬಂದಿಲ್ಲ. ದೇಶದ ಆತಂರಿಕ ಅಭಿವೃದ್ಧಿ ಬಗ್ಗೆಯೂ ಕಾಳಜಿ ವಹಿಸಿರುವ ಸರಕಾರ ರಾಜ್ಯ ಸರಕಾರಗಳಿಗೆ ಅತಿಹೆಚ್ಚು ಅನುದಾನ ಗಳನ್ನು ನೀಡುತ್ತಿದೆ. ಹೀಗೆ ನಮ್ಮ ಸರಕಾರ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ದೇಶಗಳ ಜೊತೆ ಸಂಬಂಧ, ಆರ್ಥಿಕ ಸದೃಢತೆ, ಭಾರತೀಯ ಸಾಂಸ್ಕೃತಿಕ ಪರಂಪರೆಯ ವಿಸ್ತರಣೆ, ಸೈನಿಕ ಶಕ್ತಿಯ ಪರಿಚಯ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿದೆ. ಈ ಸರಕಾರಕ್ಕೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಿರುವ ಬಗ್ಗೆ ಇಡೀ ದೇಶವೇ ಒಪ್ಪಿದೆ ಎಂದರು.
ದೀನ್ ದಯಾಳ್ ವಿದ್ಯುದೀಕರಣ ಯೋಜನೆಯಲ್ಲಿ ಇಡೀ ದೇಶದಲ್ಲಿ ವಿದ್ಯುತ್ ಇಲ್ಲದ 18500 ಗ್ರಾಮಗಳಿಗೆ ಸಂಪರ್ಕ ಒದಗಿಸಲಾಗಿದೆ. ಉಜ್ವಲ ಯೋಜನೆಯಡಿ 3.80ಕೋಟಿ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ. ಮುದ್ರಾ ಯೋಜನೆಯಡಿ ಯುವಕರಿಗೆ 10ಕೋಟಿ ರೂ. ವರೆಗೆ ಸಾಲ ನೀಡಿ ಉದ್ಯಮವನ್ನು ಬೆಳೆಸುವ ಕಾರ್ಯ ಮಾಡಲಾಗಿದೆ. ಮೂಲ ಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ಪ್ರತಾಪ್‌ಸಿಂಹ ನಾಯಕ್, ಉದಯ ಕುಮಾರ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಸುರೇಶ್ ನಾಯಕ್, ಕುತ್ಯಾರ್ ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ತಾಂತ್ರಿಕ ಸಮಸ್ಯೆಯಿಂದ ವಿಳಂಬ
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯು ಸಂಪೂರ್ಣ ಖಾಸಗಿ ಸಾರ್ವ ಜನಿಕ ಸಹಭಾಗಿತ್ವದಲ್ಲಿ ನಡೆಯುತ್ತಿರುವುದರಿಂದ ಕೆಲವೊಂದು ತಾಂತ್ರಿಕ ಸಮಸ್ಯೆ ಗಳಿದ್ದು, ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಈ ಸಂಬಂಧ ಸಚಿವ ಗಡ್ಕರಿಯನ್ನು ಭೇಟಿ ಮಾಡಿ ಚರ್ಚಿಸಿದ್ದು, ಇದೀಗ ಕಾಮಗಾರಿಯು ತುಂಬಾ ವೇಗದಲ್ಲಿ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯುತ್ತಿರುವುದ ರಿಂದ ಗುತ್ತಿಗೆ ಕಂಪೆನಿ ನವಯುಗವನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಅದು ಕೋರ್ಟ್ ಮೆಟ್ಟಿಲೇರಿ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.







