ಗುರು ಬನ್ನಂಜೆ ಸಂಜೀವ ಸುವರ್ಣ ಅಭಿನಂದನ ಸಮಿತಿ ರಚನೆ
ಉಡುಪಿ, ಜೂ.11: ಯಕ್ಷಗಾನದ ಸುಪ್ರಸಿದ್ಧ ಗುರುವಾಗಿ, ಪರಂಪರೆ ಮತ್ತು ಸಮಕಾಲೀನ ಪ್ರಯೋಗಗಳನ್ನು ನಿರ್ದೇಶಿಸಿ, ಕಲಾ ರಾಯಭಾರಿಯಾಗಿ ಜನಪ್ರಿಯತೆ ಪಡೆದಿರುವ ಉಡುಪಿ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಅಭಿನಂದಿಸುವ ಕಾರ್ಯಕ್ರಮವೊಂದನ್ನು ಆಯೋಜಿಸ ಲಾಗುತಿದ್ದು, ಇದಕ್ಕಾಗಿ ಅವರ ಶಿಷ್ಯರು ಹಾಗೂ ಅಭಿಮಾನಿಗಳು ಸೇರಿ ‘ಗುರು ಬನ್ನಂಜೆ ಸಂಜೀವ ಸುವರ್ಣ ಅಭಿಂದನಾ ಸಮಿತಿ’ಯೊಂದನ್ನು ರಚಿಸಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಜು.15ರಂದು ಅಜ್ಜರಕಾಡಿನ ಪುರಭವನದಲ್ಲಿ ಇಡೀ ದಿನದ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಸುವರ್ಣರನ್ನು ಅಭಿನಂದಿಸಲು ನಿರ್ಧರಿಸಲಾಯಿತು. ಅಲ್ಲದೇ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡುವ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲು ಸಹ ನಿರ್ಧರಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಡಾ.ಭಾಸ್ಕರಾನಂದ ಕುಮಾರ್ ಆಯ್ಕೆಯಾಗಿದ್ದಾರೆ. ಡಾ.ಪಿ.ಎಲ್.ಎನ್.ರಾವ್, ಯು.ವಿಶ್ವನಾಥ ಶೆಣೈ, ಎಂ.ಜಯರಾಮ ಪಾಟೀಲ್ ಸಮಿತಿಯ ಉಪಾಧ್ಯಕ್ಷರಾಗಿರುವರು. ಡಾ.ಪ್ರಶಾಂತ್ ಶೆಟ್ಟಿ ಕಾರ್ಯದರ್ಶಿ, ವಿದ್ಯಾಪ್ರಸಾದ್ ಕೋಶಾಧಿಕಾರಿಯಾಗಿ ನಿಯುಕ್ತರಾದರು.
ಸಮಿತಿಯ ಸದಸ್ಯರಾಗಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಹೆರ್ಗ ದಿನಕರ ಶೆಟ್ಟಿ, ಡಾ.ರಾಜೇಂದ್ರ ಕೆದಿಲಾಯ, ಡಾ.ಮಂಜುನಾಥ ಮಯ್ಯ, ಬಬಿತಾರಾಜ್ ಪರ್ಕಳ, ಗಣೇಶ ಪಾಟೀಲ್, ಪ್ರಕಾಶ್ ಕೊಡವೂರು, ಗಣೇಶ್ ನಾಯ್ಕ ಪೇತ್ರಿ, ಶ್ರೀಕಾಂತ್ ರಾವ್, ಪುರುಷೋತ್ತಮ ಅಡ್ವೆ, ಡಾ.ಶೈಲಜಾ ಇರುವರು.
ಯಕ್ಷಗಾನ ಕಲಾರಂಗ ಅಧ್ಯಕ್ಷ ಕೆ.ಗಣೇಶ ರಾವ್, ಉಪಾಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ, ತಲ್ಲೂರು ಶಿವರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.







