ಬಿಜೆಪಿ ಪಕ್ಷದ ಖಜಾಂಚಿ ಯಾರು? : ಪ್ರಶ್ನೆ ಹುಟ್ಟುಹಾಕಿದೆ ಆಯೋಗಕ್ಕೆ ಬಿಜೆಪಿ ಸಲ್ಲಿಸಿದ ಮಾಹಿತಿ

ಹೊಸದಿಲ್ಲಿ, ಜೂ.11: ಅತ್ಯಂತ ಶ್ರೀಮಂತ ರಾಜಕೀಯ ಪಕ್ಷಗಳಲ್ಲಿ ಒಂದೆನಿಸಿರುವ ಬಿಜೆಪಿ ಕಳೆದ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ರಿಟರ್ನ್ಸ್‌ನಲ್ಲಿ 2016-17ರ ಸಾಲಿನಲ್ಲಿ 1,034 ಕೋಟಿ ಆದಾಯವನ್ನು ಘೋಷಿಸಿದೆ. 2016-17ರ ಆರ್ಥಿಕ ವರ್ಷ ಬಿಜೆಪಿಯ ಪಾಲಿಗೆ ಶುಭ ವರ್ಷವಾಗಿದ್ದು ಈ ಅವಧಿಯಲ್ಲಿ ಪಕ್ಷದ ಆದಾಯದಲ್ಲಿ ಶೇ.81ರಷ್ಟು ಭರ್ಜರಿ ಹೆಚ್ಚಳವಾಗಿದೆ. ಜೊತೆಗೆ, ಈ ವರ್ಷ ಪಕ್ಷ ಸಂಗ್ರಹಿಸಿದ ಹಣವು ಇತರ ಎಲ್ಲಾ ರಾಜಕೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ಮೊತ್ತದ ಎರಡು ಪಟ್ಟು ಆಗಿರುವುದು ಗಮನಾರ್ಹವಾಗಿದೆ. ಆದರೆ ಪಕ್ಷದ ಹಣಕಾಸು ವ್ಯವಹಾರ ನೋಡಿಕೊಳ್ಳುವ ಖಜಾಂಚಿ(ಟ್ರೆಷರರ್) ಹೆಸರನ್ನು ಮಾತ್ರ ಗೋಪ್ಯವಾಗಿರಿಸುವ ಮೂಲಕ ಬಿಜೆಪಿ, ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರವನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆದಾಯಪ್ರಮಾಣ ಪತ್ರದಲ್ಲಿ ಅರ್ಥವಾಗದ ರೀತಿಯ ಸಹಿಯೊಂದಿದ್ದು, ‘ಫಾರ್ ಟ್ರೆಷರರ್’ ಎಂದು ಮಾತ್ರ ನಮೂದಿಸಲಾಗಿದೆ. ಆದರೆ ಖಜಾಂಚಿಯ ಹೆಸರನ್ನು ತಿಳಿಸಲಾಗಿಲ್ಲ. ಪಕ್ಷದ ಖಜಾಂಚಿಯ ಸಹಿಯ ಬದಲು ‘ಫಾರ್ ಟ್ರೆಷರರ್’ ಎಂದು ಸಹಿ ಹಾಕಲಾಗಿದೆ. ಅಂದರೆ ಕಳೆದ ನಾಲ್ಕು ವರ್ಷಗಳಿಂದಲೂ ಬಿಜೆಪಿಯ ಸ್ವೀಕೃತಿ-ಪಾವತಿ ವ್ಯವಹಾರ ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಇಲ್ಲಿ ಮೂಡಿದೆ. ಬಿಜೆಪಿಯ ಆಡಿಟ್ ಮಾಡಲಾಗಿರುವ ಘೋಷಣೆ ಪತ್ರದಲ್ಲಿ ಕೂಡಾ ಎಲ್ಲಿಯೂ ಖಜಾಂಚಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಯಾಕೆ ಪ್ರಶ್ನಿಸಿಲ್ಲ ಎಂಬ ಪ್ರಶ್ನೆ ಇಲ್ಲಿ ಮೂಡುತ್ತಿದೆ. ಬಿಜೆಪಿ 2014ರ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ನೇತೃತ್ವದಲ್ಲಿ ಸರಕಾರ ರಚನೆಯಾಗುವ ಮೊದಲು ಪಿಯೂಷ್ ಗೋಯಲ್(ಹಾಲಿ ರೈಲ್ವೇ ಸಚಿವ) ಪಕ್ಷದ ಘೋಷಿತ ಖಜಾಂಚಿಯಾಗಿದ್ದರು. ಅಮಿತ್ ಶಾ 2014ರಲ್ಲಿ ಪಕ್ಷದ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದಾಗ ಖಜಾಂಚಿಯ ಹೆಸರನ್ನು ತಿಳಿಸಿರಲಿಲ್ಲ. ಮೋದಿಯ ನಂಬಿಗಸ್ತ, ಕಾಕಾಜಿ ಎಂದೇ ಕರೆಯಲ್ಪಡುವ ಪರಿಂದು ಭಗತ್ ಖಜಾಂಚಿಯಾಗಿ ನೇಮಕಗೊಳ್ಳಬಹುದು ಎಂಬ ಊಹೆಯಿತ್ತು. ಆದರೆ ಇದು ಸುಳ್ಳಾಯಿತು. ಹಾಗಿದ್ದರೆ ಈಗಲೂ ಪಿಯೂಷ್ ಗೋಯಲ್ ಅವರೇ ಖಜಾಂಚಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಯೇ. ಒಂದು ವೇಳೆ ಹೌದೆಂದಾದಲ್ಲಿ ಇದು ಹಿತಾಸಕ್ತಿಯ ಸಂಘರ್ಷದ ಸ್ಪಷ್ಟ ನಿದರ್ಶನವಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ.
ಆದರೆ ಖಜಾಂಚಿಯ ಬಗ್ಗೆ ಬಿಜೆಪಿ ಮಾತ್ರ ನಿಗೂಢತೆ ಕಾಯ್ದುಕೊಂಡು ಬರುತ್ತಿದೆ. ರಾಜಕೀಯ ಪಕ್ಷವೊಂದರ ಖಜಾಂಚಿ ಅಥವಾ ಪಕ್ಷದಿಂದ ಅಧಿಕೃತವಾಗಿ ನೇಮಕಗೊಂಡ ವ್ಯಕ್ತಿ ಲೆಕ್ಕಪತ್ರ ನೋಡಿಕೊಳ್ಳುವ ಅಧಿಕಾರ ಹೊಂದಿರುತ್ತಾನೆ ಎಂದು ಚುನಾವಣಾ ಆಯೋಗವು ವಿತ್ತೀಯ ಪಾರದರ್ಶಕತೆ ಕುರಿತು 2014ರಲ್ಲಿ ರೂಪಿಸಿದ ಮಾರ್ಗದರ್ಶಿ ಸೂತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಾಜಿ ಮುಖ್ಯ ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗಿದ್ದ ಮೇಲೆ ಚುನಾವಣಾ ಆಯೋಗವು ಖಜಾಂಚಿಯ ಬಗ್ಗೆ ಮಾಹಿತಿ ನೀಡಬೇಕೆಂದು ಯಾಕೆ ಬಿಜೆಪಿಗೆ ಸೂಚನೆ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಣಕಾಸು ವಿವರ ಸಲ್ಲಿಕೆಗಳನ್ನು ಕೆಳಗಿನ ಹಂತದಲ್ಲೇ ಪರಿಶೀಲಿಸುವ ಕಾರಣ ಈ ಪ್ರಕರಣ ಆಯೋಗದ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಲೆಕ್ಕಪತ್ರ ವಿವರಣಾ ಪತ್ರಕ್ಕೆ ಖಜಾಂಚಿ ಸಹಿ ಹಾಕಬೇಕು ಮತ್ತು ಆತನ ಹೆಸರನ್ನು ನಮೂದಿಸಬೇಕು. ಇದಕ್ಕೆ ತಪ್ಪಿದಲ್ಲಿ ಚುನಾವಣಾ ಆಯೋಗ ಖಜಾಂಚಿ ಯಾರೆಂದು ತಿಳಿದುಕೊಳ್ಳಬೇಕು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೋರ್ವ ಮಾಜಿ ಮುಖ್ಯ ಚುನಾವಣಾಧಿಕಾರಿ ಟಿ.ಎಸ್. ಕೃಷ್ಣಮೂರ್ತಿ, ಬಿಜೆಪಿ ಸಲ್ಲಿಸಿರುವ ಲೆಕ್ಕಪತ್ರವನ್ನು ತಾನು ನೋಡಿಲ್ಲ. ಹಾಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಯೊಂದು ಪಕ್ಷದ ಸಂವಿಧಾನದಲ್ಲಿ ಪಕ್ಷದ ಲೆಕ್ಕಪತ್ರ ವಿವರಣೆಗೆ ಸಹಿ ಹಾಕುವ ಅಧಿಕಾರಿಯ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿಗೆ ನೋಟಿಸ್ ಜಾರಿಯಾಗಲಿ: ಮಾಜಿ ಸಿಇಸಿ ಖುರೇಷಿ
ಬಿಜೆಪಿಯು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಘೋಷಣಾ ಪತ್ರ (ಲೆಕ್ಕಪತ್ರ ವಿವರ) ಸ್ವೀಕಾರ ಯೋಗ್ಯವಲ್ಲ ಎಂದು ಮಾಜಿ ಮುಖ್ಯ ಚುನಾವಣಾಧಿಕಾರಿ (ಸಿಇಸಿ) ಎಸ್.ವೈ.ಖುರೇಷಿ ತಿಳಿಸಿದ್ದಾರೆ. ಬಿಜೆಪಿ ಸಲ್ಲಿಸಿದ ಘೋಷಣಾ ಪತ್ರವನ್ನು ಮಾನ್ಯ ಮಾಡದೆ, ಬಿಜೆಪಿಗೆ ನೋಟಿಸ್ ಜಾರಿಗೊಳಿಸಿ ಖಜಾಂಚಿಯ ಹೆಸರನ್ನು ಬಹಿರಂಗಗೊಳಿಸುವಂತೆ ಸೂಚಿಸಬೇಕು ಎಂದು ಅವರು ಹೇಳಿದ್ದಾರೆ.







