ಶತಮಾನ ಕಂಡ 5 ಸರಕಾರಿ ಶಾಲೆಗಳ ಉನ್ನತೀಕರಣದ ಭರವಸೆ ನೀಡಿದ ಪ್ರಕಾಶ್ ರೈ

ಮಂಡ್ಯ, ಜೂ.11: ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಹೊಣೆಗಾರಿಕೆ ಸರಕಾರಗಳ ಜತೆಗೆ ಪೋಷಕರು ಮತ್ತು ಸಮುದಾಯದ ಮೇಲಿದೆ ಎಂದು ಬಹುಭಾಷ ನಟ ಹಾಗೂ ಜಸ್ಟ್ ಆಸ್ಕ್ ಫೌಂಡೇಷನ್ ಅಧ್ಯಕ್ಷ ಪ್ರಕಾಶ್ ರೈ ಹೇಳಿದ್ದಾರೆ.
ಪಾಂಡವಪುರ ಪಟ್ಟಣದ ಫ್ರೆಂಚ್‍ರಾಕ್ಸ್ ಶತಮಾನದ ಸರಕಾರಿ ಶಾಲೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ದಾನಿಗಳು ಹಾಗೂ ಸಮಾನಮನಸ್ಕ ಶಿಕ್ಷಣ ಆಸಕ್ತರು ಮತ್ತು ಪೋಷಕರ ಸಹಕಾರದಿಂದ ಉನ್ನತೀಕರಣಗೊಳ್ಳುತ್ತಿರುವ ಫ್ರೆಂಚ್‍ರಾಕ್ಸ್ ಶಾಲೆಯನ್ನು ಸರಕಾರ ಮಾದರಿಯಾಗಿ ಸ್ವೀಕರಿಸಿ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ಸಬಲೀಕರಣಗೊಳಿಸಬೇಕಿದೆ ಎಂದರು.
ಅವನತಿ ಹಾದಿ ಹಿಡಿಯುತ್ತಿರುವ ಸರಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರು, ಪೋಷಕರು ಹಾಗೂ ಜನಸಮುದಾಯದ ಸಹಭಾಗಿತ್ವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಡಬೇಕಿದೆ. ಇಚ್ಛಾಶಕ್ತಿಯುಳ್ಳ ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಸಹಭಾಗಿತ್ವವಿದ್ದರೆ ಸಾಕು. ಅವನತಿಯತ್ತ ಸಾಗಿರುವ ಸರಕಾರಿ ಶಾಲೆಗಳನ್ನು ಉಳಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಫ್ರೆಂಚ್‍ರಾಕ್ಸ್ ಶತಮಾನ ಸರಕಾರಿ ಶಾಲೆ ಉನ್ನತೀಕರಣಕ್ಕಾಗಿ ದಿವಂಗತ ರೈತನಾಯಕ, ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ದಕ್ಷ ಅಧಿಕಾರಿ ಡಾ.ಎಚ್.ಎಲ್.ನಾಗರಾಜು, ಉನ್ನತೀಕರಣ ಸಮಿತಿ ಹಾಗೂ ಎಸ್‍ಡಿಎಂಸಿ ಸದಸ್ಯರು ಶ್ರಮಿಸಿದ್ದರು. ಅದರ ಜತೆಗೆ ಸಮಾಜದ ಹೊಣೆಗಾರಿಕೆಯೂ ಮುಖ್ಯ. ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಮಕ್ಕಳ ಮನೆ ಪ್ರಾರಂಭಿಸಿರುವುದು ಒಂದು ದೊಡ್ಡ ಪ್ರಯೋಗ. ಈ ರೀತಿ ರಾಜ್ಯದ ಎಲ್ಲ ಸರಕಾರಿ ಶಾಲೆಗಳಲ್ಲೂ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಖಾಸಗಿ ಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಜಾಹಿರಾತು ನೀಡಿ ಪ್ರವೇಶ ನೀಡಲಾಗುತ್ತಿದೆ. ಇಂತಹ ಖಾಸಗಿ ಒಡೆತನದ ಮಾಫಿಯಾ ವಿರುದ್ಧ ಇಡೀ ಜನಸಮುದಾಯವೇ ನಿಲ್ಲಬೇಕು. ಹೆಚ್ಚಿನದಾಗಿ ಪೋಷಕರು ತೊಡಗಿಸಿಕೊಳ್ಳಬೇಕಿದೆ. ಸರಕಾರಿ ಶಾಲೆ ಮತ್ತು ಸರಕಾರಿ ಆಸ್ಪತ್ರೆ ಬಗ್ಗೆ ಜನರು ಇಟ್ಟುಕೊಂಡಿರುವ ಭಯ ದೂರವಿರಿಸಬೇಕು. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮುದಾಯಕ್ಕಾಗಿ ಶಿಕ್ಷಣ ಎಂಬುದನ್ನು ಸಾಬೀತುಪಡಿಸಲು ನಾವೆಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಸರಕಾರಿ ಶಾಲೆಗಳನ್ನು ಉನ್ನತೀಕರಿಸಲು ಸರಕಾರ ಮುಂದಾಗುತ್ತಿಲ್ಲವೆಂದು ವಿಷಾದಿಸಿದ ರೈ, ಸಾಂಘಿಕ ಶ್ರಮ ಮತ್ತು ಸಮಾನಮನಸ್ಕರು ಒಗ್ಗೂಡಿ ಸರಕಾರಿ ಶಾಲೆಗಳ ಉನ್ನತೀಕರಣ ಮಾಡಬೇಕು. ಖಾಸಗಿ ಶಾಲೆಗಳಿಗೆ ಸರಿಸಮಾನವಾದ ಶಿಕ್ಷಣ ನೀಡಬೇಕು. ಜತೆಗೆ ಪಠೇತರ ಚಟುವಟಿಕೆಗಳು ಹಾಗೂ ಕ್ರೀಡೆಗಳ ಬಗ್ಗೆ ಸರಕಾರಿ ಶಾಲೆಯ ಮಕ್ಕಳಿಗೆ ತರಬೇತಿ ನೀಡಬೇಕು ಎಂದು ಕಿವಿಮಾತು ಹೇಳಿದರು.
ಎಸ್‍ಡಿಎಂಸಿ ಅಧ್ಯಕ್ಷ ಎನ್.ಕೃಷ್ಣೇಗೌಡ, ಉನ್ನತೀಕರಣ ಸಮಿತಿಯ ಧನ್ಯಕುಮಾರ್, ಎಂ.ರಾಜೀವ್, ಎಂ.ಎಚ್.ನಂದೀಶ್, ಮುಖ್ಯ ಶಿಕ್ಷಕ ಡಿ.ಸಿ.ಯೋಗಣ್ಣ, ಹಿರಿಯ ವಿದ್ಯಾರ್ಥಿಗಳಾದ ಮಹದೇಶ್ವರಪುರ ರಾಮಚಂದ್ರಪ್ಪ, ಹರಳಹಳ್ಳಿ ಗೋವಿಂದರಾಜು, ಸುಜುಕಿ ಮಂಜು, ಜನಶಕ್ತಿ ಸಂಘಟನೆಯ ಮಲ್ಲಿಗೆ, ಮುತ್ತುರಾಜ್, ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ರವೀಂದ್ರಕುಮಾರ್, ಇತರರು ಹಾಜರಿದ್ದರು.
“ರಾಜ್ಯದ ಸರಕಾರಿ ಶಾಲೆಗಳನ್ನು ಮಾದರಿಗೊಳಿಸುವ ಬಗ್ಗೆ ಸಂಬಂಧಪಟ್ಟ ಎಲ್ಲಾ ಸಚಿವರ ಜತೆ ಮಂಗಳವಾರ (ಜೂ.12) ಮಾತುಕತೆ ನಡೆಸಲಿದ್ದೇವೆ. ಜಸ್ಟ್ ಆಸ್ಕ್ ಫೌಡೇಶನ್ ಸಂಸ್ಥೆಯ ವತಿಯಿಂದ ಪ್ರೆಂಚ್‍ರಾಕ್ಸ್ ಶಾಲೆ ಸೇರಿದಂತೆ ಮಂಡ್ಯ ಜಿಲ್ಲೆಯ 5 ಶತಮಾನದ ಶಾಲೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇವೆ. ಹದಿನೈದು ದಿನಗಳಲ್ಲಿ ಶಾಲೆಯ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳ ಸಮಸ್ಯೆ ನಿವಾರಣೆಗೆ ಸಾಧ್ಯವಾದಷ್ಟು ಶ್ರಮಿಸುತ್ತೇವೆ”.
-ಪ್ರಕಾಶ್ ರೈ.







