ಮಂಗಳೂರು: ಫ್ಯಾನ್ಸಿ ಅಂಗಡಿಯಿಂದ ನಗದು, ಸಾಮಗ್ರಿ ಕಳವು
ಮಂಗಳೂರು, ಜೂ. 11: ಫ್ಯಾನ್ಸಿ ಅಂಗಡಿಯೊಂದರಿಂದ ನಗದು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾರಾಮತಿ ಎಂಬವರು ನೀರುಮಾರ್ಗ ಗ್ರಾಮದ ಕೆಲರಾಯಿ ಚರ್ಚ್ ಬಿಲ್ಡಿಂಗ್‌ನಲ್ಲಿ ಮಂಜುಳಾ ಫ್ಯಾನ್ಸಿ ಎಂಬ ಅಂಗಡಿಯನ್ನು ಹೊಂದಿರುತ್ತಾರೆ. ರವಿವಾರ ಆದ ಕಾರಣ ಅಂಗಡಿ ತೆರೆದಿರಲಿಲ್ಲ. ಸಂಜೆ 6 ಗಂಟೆಗೆ ಫ್ಯಾನ್ಸಿ ಅಂಗಡಿಯ ಮುಂಭಾಗದಿಂದ ವಾಕಿಂಗ್ ಹೋಗುವ ಸಮಯ ಅಂಗಡಿ ಹಾಕಿದ್ದ ಬೀಗ ಸರಿಯಾಗಿ ಇದ್ದುದ್ದನ್ನು ತಾರಾಮತಿ ನೋಡಿದ್ದಾರೆ. ಆದರೆ, ಸೋಮವಾರ ಬೆಳಗ್ಗೆ 8 ಗಂಟೆಗೆ ಅಂಗಡಿಗೆ ಬಂದಾಗ, ಅಂಗಡಿಗೆ ಹಾಕಿದ್ದ ಬೀಗ ಇಲ್ಲದೆ ಇದ್ದು, ಅಂಗಡಿಯ ಶಟರ್ ಸ್ವಲ್ಪ ತೆರೆದ ಸ್ಥಿತಿಯಲ್ಲಿತ್ತು. ತಾರಾಮತಿ ಅವರು ಅಂಗಡಿಯ ಒಳಗಡೆ ಹೋಗಿ ನೋಡಿದಾಗ, ಕ್ಯಾಶ್ ಡ್ರವರ್‌ನಲ್ಲಿಟ್ಟಿದ್ದ ಸುಮಾರು 15,000 ರೂ. ಮತ್ತು 2,000ರೂ. ಮೌಲ್ಯದ ಫ್ಯಾನ್ಸಿ ಸಾಮಗ್ರಿಗಳು ಕಳವು ಆಗಿರುವುದು ಗಮನಕ್ಕೆ ಬಂದಿದೆ.
ರವಿವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 8 ಗಂಟೆಯ ಮಧ್ಯೆ ಯಾರೋ ಕಳ್ಳರು ಫ್ಯಾನ್ಸಿಯ ಅಂಗಡಿಯ ಶಟರ್‌ಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ ಎಂದು ತಾರಾಮತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.





