ವಯೋನಿವೃತ್ತಿ ಹೊಂದಿದ ಅಭಿಯಂತರ ಮಂಜುನಾಥ್‍ಗೆ ನಾಗರೀಕ ಸನ್ಮಾನ

ಮೈಸೂರು,ಜೂ.11: ವಯೋನಿವೃತ್ತಿ ಹೊಂದಿದ ಸಹಾಯಕ ಅಭಿಯಂತರಾದ ಎ.ಎಂ.ಮಂಜುನಾಥ್ ಅವರಿಗೆ ವಾರ್ಡ್ ನಂ 36ರ ನಾಗರೀಕರು ಆತ್ಮೀಯವಾಗಿ ಸನ್ಮಾನಿಸಿದರು.
ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಶಾಲೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಶಾಸಕ ವಾಸು ಅವರು ಎ.ಎಂ.ಮಂಜುನಾಥ್ ದಂಪತಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಎ.ಎಂ.ಮಂಜುನಾಥ್ ಅವರು ನಗರಪಾಲಿಕೆಯ ವಲಯ ಕಚೇರಿ 6ರ ವಾರ್ಡ್ ನಂ 36ರಲ್ಲಿ ಸುಮಾರು 4 ವರ್ಷಗಳ ಕಾಲ ಸಹಾಯಕ ಅಭಿಯಂತರರಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕಾರ್ಯವೈಖರಿಯನ್ನು ಮೆಚ್ಚಿದ ವಾರ್ಡ್ ನಂ. 36ರ ನಾಗರೀಕರು ಮಂಜುನಾಥ್ ಅವರನ್ನು ಅಭಿನಂದಿಸಿದರು.
ನಗರಪಾಲಿಕೆ ವಲಯ ಕಚೇರಿ 6ರ ಪ್ರಭಾರ ಆಯುಕ್ತ ಎಚ್.ನಾಗರಾಜು, ಸ್ವತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ, ನಂಜರಾಜ ಬಹದ್ದೂರ್ ಛತ್ರದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸಿ.ಕೃಷ್ಣಪ್ಪ, ನಗರಪಾಲಿಕೆ ಸದಸ್ಯ ಪಿ.ಪ್ರಶಾಂತ್ ಗೌಡ ಇತರರು ಉಪಸ್ಥಿತರಿದ್ದರು.





