ಸಮ್ಮಿಶ್ರ ಸರಕಾರದ ಬಲವರ್ಧನೆಗೆ ಜನಪರ ಕಾಳಜಿ ಇರಬೇಕು: ಸಾಹಿತಿ ಬನ್ನೂರು ಕೆ.ರಾಜು ಸಲಹೆ
ಮೈಸೂರು,ಜೂ.11: ಜೆಡಿಎಸ್ ಮತ್ತು ಕಾಂಗ್ರೆಸ್ ಉಭಯ ಪಕ್ಷಗಳೂ ಒಂದುಗೂಡಿ ಜಾತ್ಯತೀತ ಆಶಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಾರಥ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿ ಪ್ರಬುದ್ಧತೆ ತೋರಿರುವುದು ನಾಡಿನ ಜನರ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಕೆಯಾದರು, ಸಮ್ಮಿಶ್ರ ಸರಕಾರದ ಬಲವರ್ಧನೆಗೆ ಜನಪರ ಕಾಳಜಿ ಇರಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಸಲಹೆ ನೀಡಿದ್ದಾರೆ.
ಸದ್ಯ ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಚುನಾವಣೆ ಎದುರಾಗಲಿಲ್ಲವಲ್ಲ ಎಂದು ಜನ ನಿಟ್ಟುಸಿರು ಬಿಟ್ಟರು. ಹಿಂದೆ ಇಂತಹದ್ದೇ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷದೊಡನೆ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಪರವಾದ ಒಳ್ಳೆ ಸರ್ಕಾರವನ್ನು ನೀಡಿದ್ದನ್ನು ಕಂಡಿರುವ ನಾಡಿನ ಜನತೆ ಮತ್ತೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಂದ ಅಂತಹದ್ದೇ ಜನಪರ ಸರ್ಕಾರವನ್ನು ನಿರೀಕ್ಷಿಸಿದೆ.
ಆದರೆ ಜನರ ನಿರೀಕ್ಷೆ ಹುಸಿಯಾಗುವುದೇನೋ ಎಂಬಂತೆ ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಗಳಿಗೆಯಿಂದಲೂ ಒಂದಲ್ಲ ಒಂದು ಗೊಂದಲಗಳು ನಡೆಯುತ್ತಲೇ ಇದೆ. ಕಾಂಗ್ರೆಸ್-ಜೆಡಿಎಸ್ ನಡುವೆ ಅಧಿಕಾರ ಹಂಚಿಕೆಯಲ್ಲಿ ಕಿತ್ತಾಟ. ಸಚಿವ ಸ್ಥಾನಕ್ಕಾಗಿ ಎರಡೂ ಪಕ್ಷಗಳ ಘಟಾನು ಘಟಿನಾಯಕರ ಮುನಿಸು. ಸಚಿವಸ್ಥಾನ ಸಿಕ್ಕ ನಂತರ ಇಂತಹದ್ದೇ ಖಾತೆ ಬೇಕೆಂಬ ಕ್ಯಾತೆ. ಜಿ.ಟಿ. ದೇವೇಗೌಡ, ಡಿ.ಕೆ. ಶಿವಕುಮಾರ್ ರಂತಹ ಮುತ್ಸದ್ಧಿ ರಾಜಕಾರಣಿಗಳಿಂದಲೇ ಅವರಿಗೆ ನೀಡಿರುವ ಖಾತೆಗಳ ಬಗ್ಗೆ ಅಪಸ್ವರ. ಇನ್ನು ಸಚಿವರುಗಳ ವಿದ್ಯಾರ್ಹತೆಯ ಬಗ್ಗೆ ಚರ್ಚೆ. ಕೇವಲ ನಾಲ್ಕನೇ ತರಗತಿ ಓದಿರುವ ಬಿಹಾರದ ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಯಶಸ್ವಿಯಾಗಿರುವುದು ಹಾಗೆಯೇ ನಮ್ಮ ರಾಜ್ಯದ ಹಿರಿಯ ರಾಜಕಾರಣಿ ಜಾಫರ್ ಶರೀಫ್ ಸಹ ಹೆಚ್ಚಿನ ವಿದ್ಯಾರ್ಹತೆ ಇರದಿದ್ದರೂ ಕೇಂದ್ರ ಸಚಿವರಾಗಿ ರೈಲ್ವೆ ಖಾತೆಯನ್ನು ಹಾಗೂ ಇನ್ನಿತರೇ ಖಾತೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ನಮ್ಮ ಕಣ್ಮುಂದೆ ಇದ್ದರೂ ಸಚಿವರುಗಳ ವಿದ್ಯಾರ್ಹತೆಯ ಬಗ್ಗೆ ದೋಸ್ತಿಗಳಿಂದಲೇ ಉಯಿಲೆಬ್ಬಿಸಲಾಗುತ್ತಿದೆ.
ಅಧಿಕಾರಕ್ಕೆ ಬರುವಾಗ ಯಾವುದೇ ಷರತ್ತಿಲ್ಲದೆ ಬೇಷರತ್ ಬೆಂಬಲ ಘೋಷಿಸಿದ್ದ ಕಾಂಗ್ರೆಸ್ ಈಗ ಕ್ಷಣ ಕ್ಷಣಕ್ಕೂ ಷರತ್ತು ವಿಧಿಸುತ್ತಿದೆ. ಸಿದ್ದರಾಮಯ್ಯನ ಮಾತನ್ನು ಕಾಂಗ್ರೆಸ್ಸಿಗರೇ ಕೇಳುವ ಪರಿಸ್ಥಿತಿಯಲ್ಲಿಲ್ಲ. ಕುಮಾರಸ್ವಾಮಿಯ ನಡೆಯನ್ನು ಜೆಡಿಎಸ್‍ನವರೇ ಒಪ್ಪುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ ಎರಡೂ ಪಕ್ಷಗಳ ನಡುವೆ ಸಮನ್ವಯ ಮಾಡುವುದಾದರೂ ಹೇಗೆ? ಇದನ್ನೆಲ್ಲಾ ನೋಡುತ್ತಿರುವ ನಾಡಿನ ಜನತೆಗೆ ಸಮ್ಮಿಶ್ರ ಸರ್ಕಾರದ ಉಳಿವಿನ ಬಗ್ಗೆ ಸಂಶಯ ಕಾಡದಿರದು. ವಿರೋಧಿಗಳು ಒಂದುಗೂಡುವುದು ದೊಡ್ಡ ವಿಷಯವಲ್ಲ. ಒಂದಾಗಿ ಸಾಧಿಸಿ ತೋರಿಸುವುದು ಬಹು ದೊಡ್ಡ ವಿಷಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







