ಮೋದಿ, ಫಡ್ನವೀಸ್ ಹತ್ಯೆ ಸಂಚು ಆರೋಪ ‘ರೋಮಾಂಚನಕಾರಿ ಭಯಾನಕ ಕಥೆ’: ಶಿವಸೇನೆ ವ್ಯಂಗ್ಯ

ಹೊಸದಿಲ್ಲಿ, ಜೂ. 11: ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹತ್ಯಾ ಸಂಚನ್ನು ‘ರೋಮಾಂಚನಕಾರಿ ಭಯಾನಕ ಕಥೆ’ ಎಂದು ಸೋಮವಾರ ವ್ಯಾಖ್ಯಾನಿಸಿರುವ ಶಿವಸೇನೆ, ಚುನಾವಣೆಯ ಮುಂಚಿತವಾಗಿ ಇಂತಹ ಮಾಹಿತಿಗಳು ಆಗಾಗ ಪ್ರಚಾರವಾಗುತ್ತಾ ಇರುತ್ತದೆ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ದೀರ್ಘಾಯುಷ್ಯ ಹಾರೈಸಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತನ್ನ ಅಧಿಕೃತ ಮುಖವಾಣಿಯಾದ ಸಾಮ್ನಾದಲ್ಲಿ, ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆಯಾದ ಮಸ್ಸಾದ್‌ನಿಂದ ನೀಡುತ್ತಿರುವ ಭದ್ರತೆಯಂತೆ ಮುಖ್ಯಮಂತ್ರಿಗೆ ಭದ್ರತೆ ನೀಡಬೇಕು ಎಂದಿದೆ.
ಬೆದರಿಕೆ ಪತ್ರ ಮೋದಿ ಅವರ ಬೆಂಬಲವನ್ನು ಹೆಚ್ಚಿಸುವ ತಂತ್ರ ಎಂದು ಎನ್‌ಸಿಪಿ ಹಾಗೂ ಕಾಂಗ್ರೆಸ್ ಟೀಕಿಸಿದ ದಿನದ ಬಳಿಕ ಸೇನೆ ಈ ಹೇಳಿಕೆ ನೀಡಿದೆ. ಫಡ್ನವೀಸ್ ಅವರಿಗೆ ಬೆದರಿಕೆ ಪತ್ರ ಬಂದ ಬಗ್ಗೆ ತನಿಖಾ ಸಂಸ್ಥೆ ಬಹಿರಂಗಗೊಳಿಸಿರುವುದು ‘ರೋಮಾಂಚನಕಾರಿ ಭಯಾನಕ ಕಥೆ’ಗಿಂತ ವಿಶೇಷವಾಗಿ ಏನೂ ಕಾಣುತ್ತಿಲ್ಲ ಎಂದು ಅದು ಹೇಳಿದೆ. ಲಕ್ಷಾಂತರ ಜನರ ಹತ್ಯೆಯಾದರೆ ತೊಂದರೆ ಇಲ್ಲ, ಆದರೆ, ಲಕ್ಷಾಂತರ ಜನರ ಸಂರಕ್ಷಕ ಉಳಿಯಬೇಕು ಎಂದು ಶಿವಸೇನೆ ವ್ಯಂಗ್ಯವಾಡಿದೆ.
ಚುನಾವಣೆಗಿಂತ ಮುನ್ನ ಇಂತಹ ಸುದ್ದಿಗಳು ಬಹಿರಂಗವಾಗುವ ಪ್ರವೃತ್ತಿ ಚಿಂತಾಜನಕ. ಈ ವಿಷಯವನ್ನು ರಾಜಕೀಯಗೊಳಿಸಬೇಕು ಹಾಗೂ ಇದು ಖಂಡನಾರ್ಹ ಎಂದು ಸಾಮ್ನಾದ ಸಂಪಾದಕೀಯ ಹೇಳಿದೆ.







