ಪ್ರತಿಯೊಬ್ಬರು ವಿದ್ಯಾವಂತರಾಗಬೇಕು : ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು, ಜೂ.11: ಸಮಾಜದಲ್ಲಿ ವಿದ್ಯೆ ಮಾತ್ರ ಬದುಕಿನ ದಿಕ್ಕನ್ನು ಬದಲಾಯಿಸುತ್ತದೆ ಪ್ರತಿಯೊಬ್ಬರು ವಿದ್ಯಾವಂತರಾಗಬೇಕೆಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು.
ಅವರು ಸೋಮವಾರ ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಭವನದಲ್ಲಿ 6 ನೇ ತರಗತಿಯ ವಿದ್ಯಾರ್ಥಿಗಳ ವಸತಿ ಶಾಲೆಯ ಸೇರ್ಪಡೆಯ ಕೌನ್ಸಿಲಿಂಗ್ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ನವೋದಯ ಹಾಗೂ ಕೇಂದ್ರೀಯ ವಿದ್ಯಾಲಯಗಳನ್ನು ಹಾಗೂ ರಾಜ್ಯ ಸರ್ಕಾರ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಇಂದಿರಾಗಾಂಧಿ ವಸತಿ ಶಾಲೆಗಳನ್ನು ತೆರೆದಿದ್ದು ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ನೀಡಲು ಮುಂದಾಗಿದೆ ಎಂದರು.
ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದಬೇಕು ಎಂಬ ಉದ್ದೇಶದಿಂದ ಆರ್.ಟಿ.ಇ ಕಾಯ್ದೆಯನ್ನು ಜಾರಿಗೆ ತಂದು ಸರ್ಕಾರವೇ ಅವರುಗಳಿಗೆ ಶುಲ್ಕ ಭರಿಸುತ್ತಿದೆ ಎಂದ ಅವರು ವಿದ್ಯೆ ಮಾತ್ರ ಬದುಕಿನ ದಿಕ್ಕನ್ನು ಬದಲಾಯಿಸುವುದರ ಜೊತೆಗೆ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದರು.
ವಿದ್ಯೆ ವಂಶಪಾರಂಪರಿಕವಾಗಿ ಬರುವಂತದ್ದಲ್ಲ ಅದು ಸಾಧಕನ ಸ್ವತ್ತಾಗಿರುತ್ತದೆ ಎಂದ ಅವರು ತೆರಿಗೆ ಹಣದಿಂದ ನಮ್ಮಗಳಿಗೆ ಸರ್ಕಾರ ಉಚಿತ ಶಿಕ್ಷಣವನ್ನು ನೀಡುತ್ತಿದೆ ಇದರ ಋಣವನ್ನು ಉತ್ತಮ ಶಿಕ್ಷಣವನ್ನು ಪಡೆಯುವುದರೊಂದಿಗೆ ಪ್ರಾಮಾಣಿಕತೆಯ ಮೂಲಕ ತೀರಿಸಬೇಕೆಂದರು.
ಈ ದಿನ ನಡೆಯುತ್ತಿರುವ ಕೌನ್ಸಿಲಿಂಗ್‍ನಲ್ಲಿ 1710 ಜನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇವರುಗಳಿಗೆ ಮೆರಿಟ್ ಆಧಾರದ ಮೇಲೆ ಶಾಲೆಗಳನ್ನು ನಿಯೋಜಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಮಾತನಾಡಿ ಸರ್ಕಾರ ಎಲ್ಲರಿಗೂ ಶಿಕ್ಷಣವಂತರನ್ನಾಗಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣದಿಂದ ಮಾತ್ರ ಬದಲಾವಣೆ ಕಾಣಲು ಸಾಧ್ಯ, ಶಿಕ್ಷಣ ಪ್ರತಿಯೊಬ್ಬರನ್ನು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಭಿಗಳನ್ನಾಗಿಸುತ್ತದೆ ಆದ್ದರಿಂದ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಸಮಗ್ರ ಗಿರಿಜನ ಯೋಜನೆಯ ಸಮನ್ವಯಾಧಿಕಾರಿ ಅಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.







