ವಿದ್ಯಾರ್ಥಿಗಳಿಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣ: ಆರೋಪಿಯ ವಿರುದ್ಧ ಪ್ರಕರಣ ದಾಖಲು

ಪುತ್ತೂರು, ಜೂ. 11: ಪುತ್ತೂರಿನ ಕಾಲೇಜು ಕ್ಯಾಂಪಸ್ ಹೊರಗಡೆ ವಿದ್ಯಾರ್ಥಿಗಳಿಬ್ಬರಿಗೆ ಹಲ್ಲೆ ನಡೆಸಿ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದ ಆರೋಪದಲ್ಲಿ ಕಳೆದ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದ ಪುತ್ತೂರಿನ ಕಲ್ಲಿಮಾರ್ ನಿವಾಸಿ ಅಜೇಯನಾಥ್ ಶೆಟ್ಟಿ ಎಂಬಾತನ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಮತ್ತು ಆ ನಂತರದ ದಿನಗಳಲ್ಲಿ ಅಜೇಯನಾಥ್ ಶೆಟ್ಟಿ ಕಾಲೇಜು ಕ್ಯಾಂಪಸ್ ಹೊರಗಡೆ ಇರುವ ನೆಹರೂ ನಗರದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಗಹನ್ (19) ಮತ್ತು ಲಿಖಿತ್ (19) ಎಂಬವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಗುಡ್ಡೆಯ ಕಡೆಗೆ ಎಳೆದುಕೊಂಡು ಹೋಗಿ ಹಲ್ಲೆಗೈದು ಪ್ರಾಂಶುಪಾಲರಿಗೆ ಹಾಗೂ ಪೊಲೀಸರಿಗೆ ಈ ವಿಷಯವನ್ನು ತಿಳಿಸಬಾರದೆಂದು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ.
ವಿದ್ಯಾರ್ಥಿಗಳಿಬ್ಬರಿಗೆ ಅಜೇಯನಾಥ್ ಶೆಟ್ಟಿ ಹಲ್ಲೆ ನಡೆಸಿರುವ ದೃಶ್ಯಾವಳಿಯ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊವನ್ನು ಗಮನಿಸಿದ ಜಿಲ್ಲಾ ಎಸ್ಪಿ ರವಿತಾಂತೇ ಗೌಡ ಅವರು ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪುತ್ತೂರು ನಗರ ಪೊಲೀಸರಿಗೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸರು ಅಜೇಯನಾಥ್ ಶೆಟ್ಟಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದು ಸೋಮವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವುದಾಗಿ ತಿಳಿದು ಬಂದಿದೆ.







