ಮಡಿಕೇರಿ : ಮಳೆಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ

ಮಡಿಕೇರಿ,ಜೂ.11:ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದೆರಡು ದಿನಗಳ ವರುಣನ ಅರ್ಭಟಕ್ಕೆ ಮರಗಳು ಧರೆಗುರುಳಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಹಲವು ಮನೆಗಳು, ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಮನೆ ಕಳೆದುಕೊಂಡವರು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಂಕಷ್ಟದಲ್ಲಿರುವ ನಿವಾಸಿಗಳಿಗೆ ಅಭಯ ನೀಡಿದರು. ಸೋಮವಾರಪೇಟೆ ತಾಲ್ಲೂಕಿನ ಸಿದ್ಧಾರ್ಥನಗರ, ಹಾನಗಲ್ ಬಾಣೆ, ಬಜೆಗುಂಡಿ ಸೇರಿದಂತೆ ಅನೇಕ ಭಾಗಗಳಿಗೆ ಶಾಸಕರು ಭೇಟಿ ನೀಡಿದರು. ಸೂಕ್ತ ಪರಿಹಾರ ದೊರಕಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
40 ಕ್ಕೂ ಅಧಿಕ ವಿದ್ಯುತ್ ಕಂಬಗಳು ನಾಶ
ಶಾಂತಳ್ಳಿ ವಲಯದಲ್ಲಿ 40 ಕಂಬಗಳು ಮುರಿದುಬಿದ್ದಿವೆ. ತಾಕೇರಿ, ಕಿರಗಂದೂರು, ಕೊತ್ನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಬಾಚಳ್ಳಿ, ಕುಮಾರಳ್ಳಿ, ಹಂಚಿನಳ್ಳಿ, ಹರಗ, ಬೆಟ್ಟದಳ್ಳಿ, ದೊಡ್ಡಮಳ್ತೆ, ಸುಳಿಮಳ್ತೆ, ಕೂಗೂರು ಗ್ರಾಮಗಳು ಕರೆಂಟ್ ಇಲ್ಲದೆ ಕತ್ತಲೆಯಲ್ಲೇ ದಿನದೂಡಬೇಕಾಗಿದೆ.
ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಕಂಬ, ತಂತಿ ಸರಿಪಡಿಸುವ ಕರ್ತವ್ಯದಲ್ಲಿ ತೊಡಗಿದ್ದಾರೆ. ತಲ್ತಾರೆಶೆಟ್ಟಳ್ಳಿಯ ಬಗ್ಗನಮನೆ ತನಕ ವಿದ್ಯುತ್ ಲೈನ್ ದುರಸ್ತಿಪಡಿಸಿದ್ದು, ತಾಕೇರಿ, ಕಿರಗಂದೂರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎರಡು ದಿನಗಳಾಗಬಹುದು ಎಂದು ಕಿರಿಯ ಅಭಿಯಂತರ ಕುಮಾರ್ ತಿಳಿಸಿದರು. ಕಾಫಿ ತೋಟಗಳಲ್ಲೂ ಮರಗಳು ಹಾಗು ರೆಂಬೆಗಳು ಮುರಿದು ಬೀಳುತ್ತಿರುವ ಪರಿಣಾಮ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.







