ಸಚಿವರ ಆಗಮನದಿಂದ ಕಳೆಗಟ್ಟಿದ ಶಕ್ತಿಕೇಂದ್ರ
ಬೆಂಗಳೂರು, ಜೂ. 11: ಕಳೆದ ಮೂರು ತಿಂಗಳಿಂದ ಜನಪ್ರತಿನಿಧಿಗಳಿಲ್ಲದೆ ಬಣಗುಡುತ್ತಿದ್ದ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಂಪುಟ ಸಚಿವರ ಆಗಮನದಿಂದ ಕಳೆಗಟ್ಟಿದ್ದು, ಅಧಿಕಾರ ಕೇಂದ್ರದಲ್ಲಿ ಲವಲವಿಕೆ ಮರುಕಳಿಸಿದೆ.
ಜೂ.8ಕ್ಕೆ ಖಾತೆ ಹಂಚಿಕೆ ಮಾಡಲಾಯಿತಾದರೂ, ಜೂ.9-10ಕ್ಕೆ ಎರಡನೆ ಶನಿವಾರ, ರವಿವಾರ ಕಚೇರಿಗಳಿಗೆ ರಜೆಯಿದ್ದ ಕಾರಣ ಸಚಿವರು ವಿಧಾನಸೌಧಕ್ಕೆ ಆಗಮಿಸಲಿರಲಿಲ್ಲ. ಇಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಲಸಂಪನ್ಮೂಲ/ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಅತ್ತ ವಿಕಾಸಸೌಧದಲ್ಲಿ ವಸತಿ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೀಗಾಗಿ ಶಕ್ತಿಕೇಂದ್ರಗಳಲ್ಲಿ ಸಚಿವರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಜನಸಂದಣಿ ಕಂಡುಬಂತು.
ಮೇ 23ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕಾಂಗ್ರೆಸ್- ಜೆಡಿಎಸ್ ವೆೆುತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಸಂಪುಟ ರಚನೆ ವಿಳಂಬವಾಗಿತ್ತು. ಆ ಬಳಿಕ ಜೂ.6ಕ್ಕೆ ಮೈತ್ರಿ ಸರಕಾರದ 25 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.







