ಕಾರ್ಮಿಕ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಸಚಿವ ವೆಂಕಟರಮಣಪ್ಪ
ಬೆಂಗಳೂರು, ಜೂ.11: ಕಾರ್ಮಿಕರು ಹಾಗೂ ಬಡವರಿಗೆ ಸೌಲಭ್ಯ ಒದಗಿಸುವ ಕಾರ್ಮಿಕ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದರು. ಆನಂತರ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸಮ್ಮಿಶ್ರದಲ್ಲಿ ಕಾರ್ಮಿಕ ಇಲಾಖೆಯಂತಹ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಕಾರ್ಮಿಕರು, ಕೂಲಿ ಕಾರ್ಮಿಕರ ಹಿತ ಕಾಪಾಡುವುದರ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಪ್ರಯತ್ನಿಸಬೇಕಿದೆ ಎಂದು ಅವರು ಹೇಳಿದರು.
ಕಾರ್ಮಿಕರು ಹಾಗೂ ಬಡವರ ಶ್ರೇಯಸ್ಸಿಗೆ ಕೈಗೊಳ್ಳುವ ಕ್ರಮಗಳ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಬಡವರ ಸೇವೆ ಮಾಡುವ ಇಲಾಖೆಯಿದು. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಗುರುವಾರ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಇಲಾಖೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕಲೆ ಹಾಕುತ್ತೇನೆ. ಸಮಸ್ಯೆಗಳು ಇದ್ದರೆ ಅವುಗಳನ್ನು ಸರಿಪಡಿಸಲಾಗುವುದು ಎಂದು ವೆಂಕಟರಮಣಪ್ಪ ತಿಳಿಸಿದರು.
ಈ ಹಿಂದೆ ನಾನು ಸಣ್ಣ ಕೈಗಾರಿಕೆ ಹಾಗೂ ರೇಷ್ಮೆ ಸಚಿವನಾಗಿದ್ದಾಗಲೂ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದೆ. ನಾನು ಯಾವ ಖಾತೆಯ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು ಎಂದು ಅವರು ಹೇಳಿದರು.
ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಂದಾಗಿ ಹೋಗುತ್ತಿದ್ದೇವೆ. ಎಲ್ಲರಿಗೂ ಅಧಿಕಾರದ ಆಸೆ ಇರುತ್ತದೆ. ಐದು ವರ್ಷ ಅಧಿಕಾರವನ್ನು ಅನುಭವಿಸಿರುವವರು ಈಗ ಹೊಸಬರಿಗೆ ಅವಕಾಶ ನೀಡಲಿ. ಆಸೆ ಇರಬೇಕು, ದುರಾಸೆ ಬೇಡ. ಆತುರ, ದುಡುಕಿನ ನಿರ್ಧಾರ ಕೈಗೊಳ್ಳುವ ಬದಲು, ತಾಳ್ಮೆಯಿಂದ ಇದ್ದರೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಎಂದು ವೆಂಕಟರಮಣಪ್ಪ ತಿಳಿಸಿದರು.







