ಸಹೋದರರನ್ನು ತಡೆದು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

ರಾಂಚಿ, ಜೂ.12: ರಾತ್ರಿ ನಮಾಝ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಇಬ್ಬರನ್ನು ತಡೆದ ದುಷ್ಕರ್ಮಿಗಳು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಂಚಿಯ ನಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತರ ಸಂಬಂಧಿಕರ ಹೇಳಿಕೆಯಂತೆ ಸುಮಾರು 20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕಬ್ಬಿಣದ ರಾಡ್ ಹಾಗು ದೊಣ್ಣೆಗಳಿಂದ ದುಷ್ಕರ್ಮಿಗಳು ಥಳಿಸಿದ್ದರು ಎನ್ನಲಾಗಿದೆ.
ಅಗ್ರು ಗ್ರಾಮದಲ್ಲಿರುವ ಮಸೀದಿಯಲ್ಲಿ ರಮಝಾನ್ ತಿಂಗಳ ರಾತ್ರಿ ಸಮಯದ ನಮಾಝ್ ಮುಗಿಸಿ ಇಬ್ಬರು ಮೌಲ್ವಿಗಳು ಹಿಂದಿರುಗುತ್ತಿದ್ದರು. ನಯಾ ಸರಾಯ್ ಗ್ರಾಮದಲ್ಲಿರುವ ಮನೆಗೆ ಈ ಇಬ್ಬರು ಸಹೋದರರು ತೆರಳುತ್ತಿದ್ದು, ಈ ಸಂದರ್ಭ ಸುಮಾರು 20 ಬೈಕ್ ಗಳಲ್ಲಿ ಸ್ಥಳಕ್ಕಾಗಮಿಸಿದ ದುಷ್ಕರ್ಮಿಗಳು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿದರು. ಆದರೆ ಸಹೋದರು ಇದನ್ನು ನಿರಾಕರಿಸಿದ್ದು, ಈ ಸಂದರ್ಭ ದುಷ್ಕರ್ಮಿಗಳು ಕಬ್ಬಿಣದ ರಾಡ್ ಹಾಗು ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಒಬ್ಬ ಸಹೋದರ ತಪ್ಪಿಸಲು ಯಶಸ್ವಿಯಾಗಿದ್ದರೆ, ಮತ್ತೊಬ್ಬರು ದುಷ್ಕರ್ಮಿಗಳ ಕೈಗೆ ಸಿಲುಕಿದ್ದು, ಅಮಾನವೀಯವಾಗಿ ಅವರಿಗೆ ದುಷ್ಕರ್ಮಿಗಳು ಥಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.





