ಕಲಿಕಾ, ಚಾಲನಾ ಅನುಜ್ಞಾ ಪತ್ರಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ
ಆರ್‌ಟಿಒ ಜನಸ್ಪಂದನಕ್ಕೆ ಜನರ ಕೊರತೆ
ಮಂಗಳೂರು, ಜೂ.13: ನಗರದ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರ ಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸಾರಥಿ- 4 ತಂತ್ರಾಂಶವನ್ನು ಅಳವಡಿಸಲಾಗಿದೆ ಇದರಿಂದ ತ್ವರಿತವಾಗಿ ಪರವಾನಿಗೆ ಪಡೆಯಲು ಸಾಧ್ಯವಾಗು ತ್ತದೆ ಎಂದು ಪ್ರಭಾರ ಪ್ರಾದೇಶಿಕ ಸಾರಿಗೆ ಹಾಗೂ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಜೋನ್ ಮಿಸ್ಕತ್ ತಿಳಿಸಿದ್ದಾರೆ.
ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಪ್ರತಿ ಮಂಗಳವಾರ ನಡೆಸಲುದ್ದೇಶಿಸಿರುವ ಜನಸ್ಪಂದನ ಸಭೆಯ ಪ್ರಕಾರ ಇಂದು ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜೂನ್ ಒಂದರಿಂದಲೇ ಸಾರಥಿ-4 ಅಳವಡಿಕೆ ಯೋಜನೆಯ ಪ್ರಕಾರ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ನಡೆಯುತ್ತಿದೆ.ಕಲಿಕಾ ಅನುಜ್ಞಾ ಪತ್ರಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿಯಾದ ದಿನದಂದು ಆರ್‌ಟಿಒ ಕಚೇರಿಯಲ್ಲಿ ವೌಖಿಕ ಪರೀಕ್ಷೆಗೆ ಹಾಜರಾಗಿ ಆನ್ ಲೈನ್ ಮೂಲಕ ನಡೆಯುವ ಪರೀಕ್ಷೆಗೆ ಹಾಜರಾಗ ಬೇಕು ,ಉತ್ತೀರ್ಣಗೊಂಡ ಬಳಿಕ ‘ಪರಿವರ್ತನಾ’ ವೆಬ್ ಸೈಟ್ ಮೂಲಕ ಅಭ್ಯರ್ಥಿ ಕಲಿಕಾ ಪರವಾನಿಗೆ ಪಡೆದುಕೊಳ್ಳಬಹುದು.
ಇದರಿಂದಾಗಿ ಏಳು ದಿನ ಕಾಯ ಬೇಕಾಗಿಲ್ಲ. ಆದರೆ ಕಲಿಕಾ ಪರವಾನಿಗೆ ಪಡೆದು ಉತ್ತೀರ್ಣರಾದ ದಿನದಿಂದಲೇ ಕಲಿಕಾ ಪರವಾನಿಗೆ ದೊರೆಯುವುದಿಲ್ಲ. ಅಧಿಕೃತವಾಗಿ ಅಂಗೀಕಾರಗೊಂಡ ಬಳಿಕ ಕಲಿಕಾ ಪರವಾನಿಗೆ ನೀಡಲಾಗುತ್ತದೆ .ಕಲಿಕಾ ಪರವಾನಿಗೆ ದೊರೆತ 30 ದಿನಗಳ ಬಳಿಕ ಆನ್ ಲೈನ್ ಮೂಲಕ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಬುದಾಗಿದೆ ಎಂದು ಜೋನ್ ಮಿಸ್ಕಿತ್ ತಿಳಿಸಿದ್ದಾರೆ.
ಆರ್‌ಟಿಒ ಜನಸ್ಪಂದನಾ ಸಭೆಗೆ ಜನರ ಕೊರತೆ
ಪ್ರತಿ ಮಂಗಳವಾರ ನಡೆಸಲುದ್ದೇಶಿಸಿರುವಂತೆ ಇಂದು ಹಮ್ಮಿಕೊಂಡ ಆರ್‌ಟಿಒ ಸಭೆಗೆ ಒಬ್ಬರು ಪ್ರತಿನಿಧಿ ಮಾತ್ರ ನಿಗದಿತ ಸಮಯಕ್ಕೆ ಹಾಜರಾಗಿ ಕೆಲವು ಸಮಸ್ಯೆಗಳನ್ನು ಅಧಿಕಾರಿಯ ಗಮನಕ್ಕೆ ತಂದರು.ಆರ್‌ಟಿಒ ಜನಸ್ಪಂದನಾ ಸಭೆಯ ಬಗ್ಗೆ ಜನರಿಗೆ ಮುಂಚಿತವಾಗಿ ಸರಿಯಾದ ಮಾಹಿತಿ ದೊರೆತಿಲ್ಲ ಎಂದರು ಭಾಗವಹಿಸಿದ ಪ್ರತಿನಿಧಿಯೊಬ್ಬರು ಅಧಿಕಾರಿಯ ಗಮನಕ್ಕೆ ತಂದಾಗ ಮುಂದಿನ ದಿನಗಳಲ್ಲಿ ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ಕರ್ಕಶ ಹಾರ್ನ್ ಬಳಕೆ ನಿಯಂತ್ರಿಸಿ:- ನಗರದ ಕೆಲವು ಬಸ್, ಆಟೋ ಹಾಗೂ ಇತರ ವಾಹನಗಳಲ್ಲಿ ಸಾರಿಗೆ ಇಲಾಖೆ ನಿಗದಿ ಪಡಿಸಿದ ಡೆಸಿಬೆಲ್ ಹೊಂದಿರುವ ಹೆಚ್ಚು ಶಬ್ಧ ಹೊರಡಿಸುವ ಹಾರ್ನ್‌ಗಳನ್ನು ಅಳವಡಿಸಿರುತ್ತಾರೆ. ಕೆಎಸ್‌ಆರ್‌ಟಿಸಿ ಡಿಪೋದ ಬಳಿ ಡೀಸಲನ್ನು ರಸ್ತೆಗೆ ಚೆಲ್ಲಿ ವಾಹನ ಅಪಘಾತಕ್ಕೆ ನಡೆಯುತ್ತದೆ ಈ ಬಗ್ಗೆ ಕ್ರಮ ಕೈ ಗೊಳ್ಳಬೇಕು ಎಂದು ಸುನಿಲ್ ರಾವ್ ಆಗ್ರಹಿಸಿದರು.
ಕೆಲವು ಸಂದರ್ಭದಲ್ಲಿ ಖಾಸಗಿ ಬಸ್ಸುಗಳ ಚಾಲಕರು ಬಸ್‌ಗಳಿಗೆ ಪರವಾನಿಗೆ ಮಾರ್ಗದಲ್ಲಿ ಸಂಚರಿಸದೆ ಅವರಿಗೆ ಬೇಕಾದ ದಾರಿಯಲ್ಲಿ ಸಾಗುತ್ತಾರೆ ಎಂದು ದೂರು ನೀಡಿದರು.
ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಸಾರಿಗೆ ಇಲಾಖೆಯ ಕೆಲಸದಲ್ಲಿ ವಿಳಂಬವಾಗುತ್ತಿದ ಎಂದು ಪ್ರತಿನಿಧಿ ದೂರು ನೀಡಿದರು. ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ಆರ್‌ಟಿಒ ಇಲಾಖೆಗೆ ಪದನಿಮಿತ್ತ ಆರ್‌ಟಿಒ ಅಧಿಕಾರಿ ನೇಮಕ ಗೊಂಡಿಲ್ಲ. ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್‌ಟಿಒ ಇಲಾಖೆಯಲ್ಲಿ ಒಟ್ಟು ಮಂಜೂರಾದ 85 ಹುದ್ದೆಗಳಲ್ಲಿ 50 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದೆ ಎಂದು ಹಿರಿಯ ಆರ್‌ಟಿಒ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗಮನಕ್ಕೆ ತಂದ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಭಾರ ಆರ್‌ಟಿಒ ಅಧಿಕಾರಿ ತಿಳಿಸಿದ್ದಾರೆ.







