ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

ವಿಜಯಪುರ/ಬೆಂಗಳೂರು, ಜೂ.12: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ರೂವಾರಿ ಎನ್ನಲಾದ ಸಂಘಪರಿವಾರ ಸಕ್ರಿಯ ಕಾರ್ಯಕರ್ತ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ಬಂಧಿಸಿ, 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯಪುರದ ಸಿಂಧಗಿ ನಿವಾಸಿಯಾಗಿರುವ ಪರಶುರಾಮ್ ವಾಗ್ಮೋರೆ(26) ಇಲ್ಲಿನ ಸಂಗಮ ಲಾಡ್ಜ್ ಹಿಂದಿನ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಜೊತೆಗೆ ಮೊಬೈಲ್ ಅಂಗಡಿಯೊಂದನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಎರಡು ದಿನದ ಹಿಂದೆ ಆರೋಪಿ ಪರಶುರಾಮ್ ಅನ್ನು ವಶಕ್ಕೆ ಪಡೆದಿದ್ದ ಸಿಟ್ ತನಿಖಾಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಬಂಧನಕ್ಕೊಳಪಡಿಸಿ ಮಂಗಳವಾರ ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಜೂ.24ರವರೆಗೂ ಕಸ್ಟಡಿಗೆ ಪಡೆಯಲಾಯಿತು.
ಯಾರು ಪರುಶರಾಮ್?: ಸಿಂಧಗಿಯ ಮೂಲದ ಪರಶುರಾಮ್, ಸಂಘಪರಿವಾರ ಕಾರ್ಯಕರ್ತನಾಗಿದ್ದ. ಮತ್ತೊಬ್ಬ ಆರೋಪಿ ಮನೋಹರ ಯಡವೇ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಸದ್ಯ ಸಿಟ್ ವಶದಲ್ಲಿರುವ ಮನೋಹರ ಯಡವೆ ನೀಡಿದ ಮಾಹಿತಿ ಆಧರಿಸಿಯೇ ಪರಶುರಾಮ ವಾಗ್ಮೋರೆಯನ್ನ ಬಂಧಿಸಲಾಗಿದೆ. 2012ರಲ್ಲಿ ನಡೆದಿದ್ದ ಸಿಂಧಗಿಯ ಪಾಕಿಸ್ತಾನ ಧ್ವಜ ಹಾರಾಟ ಸಂಬಂಧಿಸಿದ ಗಲಾಟೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಎಂದು ಮೂಲಗಳು ತಿಳಿಸಿವೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ಪಾತ್ರವೇನು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಮನೋಹರ ಯಡವೆ ನಿಯೋಜನೆಯಂತೆ ಪರಶುರಾಮ್ ಗೌರಿ ಹತ್ಯೆಯನ್ನ ಮಾಡಿದ್ದ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಲ್ಲದೆ, ಸಿಟ್ ವಶಕ್ಕೆ ಪಡೆದಿರುವ ಸಿಸಿಟಿವಿ ದೃಶ್ಯಾವಳಿ ಚಿತ್ರಗಳಿಗೂ ಸಾಮ್ಯತೆ ಇದೆ ಎನ್ನಲಾಗುತ್ತಿದೆ.
ಹಿನ್ನೆಲೆ: ವಿಚಾರವಾದಿ ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್(37), ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪಯಡವೆ ಯಾನೆ ಮನೋಜ್ (29) ಎಂಬಾತನನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿ, ಮೇ 31ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನಗಳವರೆಗೆ ಕಸ್ಟಡಿಗೆ ಪಡೆದಿದ್ದರು. ಅವಧಿ ಮುಕ್ತಾಯವಾಗಿದ್ದರಿಂದ ಜೂ.11ರಂದು ಆರೋಪಿಗಳನ್ನು ನಗರದ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ, ಅವರನ್ನು ಮತ್ತಷ್ಟು ದಿನ ಕಸ್ಟಡಿಗೆ ನೀಡಬೇಕು ಎಂದು ಸಿಟ್(ಎಸ್‌ಐಟಿ) ಅಧಿಕಾರಿಗಳು ಮನವಿ ಮಾಡಿದಾಗ ನ್ಯಾಯಾಲಯ ಪುರಸ್ಕರಿಸಿತ್ತು.
2017ರ ಸೆಪ್ಟಂಬರ್ 5 ರಂದು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಪ್ರವೀಣ್ ವಿಚಾರಣೆ ಮಾಡುತ್ತಿರುವ ಸಿಟ್ ತನಿಖಾಧಿಕಾರಿಗಳು, ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಕೆಲ ತಿಂಗಳಿನಿಂದ ಪರುಶುರಾಮ್ ವಾಗ್ಮೋರೆಯ ಚಲನವಲನಗಳ ಮೇಲೆ ನಿಗಾ ವಹಿಸಿ, ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಲ್ಲಿ ಮತ್ತೊಬ್ಬ ಸೆರೆ?
ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ ಪರಶುರಾಮ್ ಹೇಳಿಕೆ ಆಧರಿಸಿ ಮಂಗಳೂರಿನಲ್ಲಿ ಸೋಮವಾರ ಮತ್ತೊಬ್ಬನನ್ನು ಬಂಧಿಸಲಾಗಿದೆ ಎನ್ನಲಾಗಿದ್ದು, ಆದರೆ, ಇದುವರೆಗೂ ಬಂಧಿತರಿಂದ ಪಿಸ್ತೂಲು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.ಸಿಸಿ ಟಿವಿಯಲ್ಲಿ ಸೆರೆ?
ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ನಿವಾಸದ ಬಳಿ ಹತ್ಯೆಗೂ ಹಿಂದಿನ ವಾರ ಆರೋಪಿಗಳಾದ ನವೀನ್ ಮತ್ತು ಪರಶುರಾಮ್ ಓಡಾಡಿರುವ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿವೆ ಎಂದು ಹೇಳಲಾಗುತ್ತಿದೆ.







