ರಾಜ್ಯದ 101 ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.12: ರಾಜ್ಯದ 13 ಶೈಕ್ಷಣಿಕ ಜಿಲ್ಲೆಗಳ 101 ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಅಗತ್ಯವಿದೆ ಎಂಬ ಪೋಷಕರ ಬೇಡಿಕೆಯನ್ನು ಪರಿಗಣಿಸಿ ಸರಕಾರ ಈ ಕ್ರಮ ಕೈಗೊಂಡಿದ್ದು, ಪ್ರಸಕ್ತ ಸಾಲಿನಿಂದಲೇ 101 ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯಲಿವೆ.
ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭ ಮಾಡುವುದರಿಂದ ಒಂದನೇ ತರಗತಿಗೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಸಂಖ್ಯೆ ಹೆಚ್ಚಾಗಬಹುದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ಪೂರ್ವ-ಪ್ರಾಥಮಿಕ ತರಗತಿಗಳಿಗೆ ಭಾರೀ ಬೇಡಿಕೆಯಿದೆ. ಹಲವಾರು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು ಮತ್ತು ಶಿಕ್ಷಕರ ಸಂಘಗಳು ಈ ಸಂಬಂಧ ಬೇಡಿಕೆ ಇಟ್ಟಿವೆ. ಇವರು ತಾವು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರ ವೆಚ್ಚ ಭರಿಸುವ ಭರವಸೆಯನ್ನೂ ಸಹ ನೀಡಿದ್ದಾರೆ. ಇದೀಗ ಪೂರ್ವ ಪ್ರಾಥಮಿಕ ತರಗತಿಗೆ ಪಠ್ಯ ಕ್ರಮ ಸಿದ್ಧವಾಗಿದೆ. ರಾಜ್ಯದಲ್ಲಿ ತೆರೆಯಲಾಗುವ 101 ಶಾಲಾ ತರಗತಿಗಳಿಗೆ ಒಂದು ಶಾಲೆಗೆ ಒಬ್ಬರಂತೆ ಶಿಕ್ಷಕರ ನೇಮಕ ಮಾಡಲಾಗುತ್ತದೆ ಅವರು ವಿವರಿಸಿದರು.
ಸರಕಾರಿ ಶಾಲೆ ಸಮೀಪದಲ್ಲಿರುವ ಅಂಗನವಾಡಿಗಳನ್ನು ಇದರಲ್ಲಿ ವಿಲೀನಗೊಳಿಸಲು ಸರಕಾರ ನಿರ್ಧರಿಸಿದೆ. ನಾವು ಈಗಾಗಲೇ 5 ಸಾವಿರಕ್ಕೂ ಅಧಿಕ ಅಂಗನವಾಡಿಗಳನ್ನು ಗುರುತಿಸಿದ್ದೇವೆ. ಅದನ್ನು ಪ್ರಾಥಮಿಕ ಶಾಲೆಗಳೊಂದಿಗೆ ಸಂಯೋಜಿಸಲು ನಿರ್ಧರಿಸಲಾಗುವುದು ಎಂದು ಹೇಳಿದರು.







