ಜೂ.18ರಂದು ಮುಖ್ಯಮಂತ್ರಿಯೊಂದಿಗೆ ಗಾರ್ಮೆಂಟ್ ನೌಕರರ ಸಂಘದ ಸಭೆ

ಬೆಂಗಳೂರು, ಜೂ.12: ಗಾರ್ಮೆಂಟ್ ಹಾಗೂ ಟೆಕ್ಸ್‌ಟೈಲ್ ನೌಕರರಿಗೆ ಕನಿಷ್ಠ ವೇತನ ಹಾಗೂ ಇತರ ಸೌಲಭ್ಯವನ್ನು ಒದಗಿಸುವ ಸಂಬಂಧ ಜೂ.18ರಂದು ಗಾರ್ಮೆಂಟ್ಸ್ ಹಾಗೂ ಟೆಕ್ಸ್‌ಟೈಲ್ ನೌಕರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಮಂಗಳವಾರ ಗಾರ್ಮೆಂಟ್ಸ್ ಹಾಗೂ ಟೆಕ್ಸ್‌ಟೈಲ್ ನೌಕರರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ, ಗಾರ್ಮೆಂಟ್ ಕ್ಷೇತ್ರದಲ್ಲಿ ಬೆಂಗಳೂರು ಇಡೀ ದೇಶದಲ್ಲಿ ಹೆಸರಾಗಿದೆ. ಇಲ್ಲಿ ತಯಾರಾಗುತ್ತಿರುವ ವಸ್ತ್ರಗಳು ಅತ್ಯುತ್ತಮ ಮಟ್ಟ ಹಾಗೂ ವಿನ್ಯಾಸಗಳಿಂದ ಕೂಡಿದೆ. ಜಗತ್ತಿನ ನಾನಾ ದೇಶಗಳಿಗೆ ಇಲ್ಲಿ ತಯಾರಿಸಲಾದ ಉಡುಪುಗಳು ರಫ್ತಾಗುತ್ತಿವೆ. ಆದರೆ, ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬದುಕಿನ ಗುಣಮಟ್ಟ ಸುಧಾರಿಸಿಲ್ಲ. ಇವರಿಗೆ ಕನಿಷ್ಠ ವೇತನ ಹಾಗೂ ಅಗತ್ಯ ಅನುಕೂಲಗಳನ್ನು ಒದಗಿಸದಿರುವುದೇ ಇದಕ್ಕೆ ಕಾರಣ ಎಂದು ಸಂಘದ ಮುಖ್ಯಸ್ಥರು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಗಾರ್ಮೆಂಟ್ ಮಾಲಕರು ಹಾಗೂ ನೌಕರರ ಎರಡೂ ಕಡೆಯ ಅಭಿಪ್ರಾಯವನ್ನು ಆಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಲಕ್ಷ್ಮಿನಾರಾಯಣ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಅಮಲನ್ ಆದಿತ್ಯ ಬಿಸ್ವಾಸ್, ಗಾರ್ಮೆಂಟ್ ಹಾಗೂ ಟೆಕ್ಸ್‌ಟೈಲ್ ನೌಕರರ ಸಂಘದ ಅಧ್ಯಕ್ಷೆ ಪ್ರತಿಭಾ, ಸಂಘದ ಕಾನೂನು ಸಲಹೆಗಾರ ಜೈರಾಮ್ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.







