ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಜಿಲ್ಲಾಧಿಕಾರಿಗಳು ಜಾಗೃತಿ ವಹಿಸಬೇಕು: ಸಚಿವ ಆರ್.ವಿ.ದೇಶಪಾಂಡೆ

ಧಾರವಾಡ, ಜೂ.12: ಕಾನೂನಿನ ಚೌಕಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪ್ರಕೃತಿ ವಿಕೋಪದಿಂದ ಉಂಟಾಗುವ ಜನ, ಜಾನುವಾರು, ಮನೆ ಮತ್ತು ಬೆಳೆಹಾನಿ ಸೇರಿದಂತೆ ಎಲ್ಲ ರೀತಿಯ ನಷ್ಟಗಳಿಗೆ ತಕ್ಷಣ ಮಾನವೀಯತೆಯಿಂದ ಸ್ಪಂದಿಸಬೇಕು ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.
ಮಂಗಳವಾರ ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಳಗಾವಿ ವಿಭಾಗ ವ್ಯಾಪ್ತಿಯ ಏಳು ಜಿಲ್ಲೆಗಳ ಮಳೆ-ಬೆಳೆ ಪರಿಸ್ಥಿತಿ, ಕೈಗೊಂಡ ಪುನರ್ವಸತಿ ಹಾಗೂ ಪರಿಹಾರ ಕ್ರಮಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣ ಈ ಉದ್ದೇಶಕ್ಕಾಗಿ ಮೀಸಲಿದೆ. ತಕ್ಷಣ ಜನ ಸಾಮಾನ್ಯರಿಗೆ ಸ್ಪಂದಿಸಬೇಕು. ಸರಕಾರ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕೃಷಿಕರು ಬಿತ್ತನೆಯಲ್ಲಿ ತೊಡಗಿದ್ದಾರೆ. ಅನೇಕ ಸ್ಥಳಗಳಲ್ಲಿ ಮಳೆಯಿಂದಾಗಿ ಮಾನವ, ಜಾನುವಾರು, ಮನೆ, ಬೆಳೆ, ರಸ್ತೆ ಸೇರಿದಂತೆ ಅನೇಕ ರೀತಿಯ ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು.
ಪ್ರಕೃತಿವಿಕೋಪ ನಿಧಿಯಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಸೂಕ್ತ ವರದಿ ಪಡೆದು, ತಕ್ಷಣ ಪರಿಹಾರ ವಿತರಿಸಬೇಕು. ಜಿಲ್ಲಾಧಿಕಾರಿಗಳು ತಮ್ಮ ಕೆಳಗಿನ ಅಧಿಕಾರಿಗಳ ಮೇಲೆ ಅವಲಂಬನೆಯಾಗದೆ, ಸ್ವತಃ ಜಿಲ್ಲಾ ಪ್ರವಾಸ ಕೈಗೊಳ್ಳುವ ಮೂಲಕ ಜನರೊಂದಿಗೆ ನೇರ ಸಂಪರ್ಕ ಸಾಧಿಸಬೇಕು. ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕಾಲಮಿತಿಯಲ್ಲಿ ವರದಿ ಪಡೆದು ಕ್ರಮ ಜರುಗಿಸಬೇಕು ಎಂದು ದೇಶಪಾಂಡೆ ಸೂಚನೆ ನೀಡಿದರು.
ಪ್ರಕೃತಿ ವಿಕೋಪದಿಂದಾಗಿ ದುರ್ಮರಣ ಉಂಟಾದರೆ ಈಗಾಗಲೆ ಅಸ್ತಿತ್ವದಲ್ಲಿರುವ ನಿಯಮಾವಳಿಯಂತೆ ನಾಲ್ಕು ಲಕ್ಷ ರೂ.ಗಳ ಪರಿಹಾರ ವಿತರಿಸಲು ಅವಕಾಶವಿದೆ. ಆದರೆ, ಇದೇ ಸಾಲಿನ ಎಪ್ರಿಲ್ 1ರಿಂದ ಅನ್ವಯವಾಗುವಂತೆ ರಾಜ್ಯ ಸರಕಾರವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚುವರಿಯಾಗಿ 1 ಲಕ್ಷ ರೂ.ನೀಡಲು ಆದೇ ನೀಡಿದೆ ಎಂದು ಅವರು ಹೇಳಿದರು. ಆದುದರಿಂದ, ಎಪ್ರಿಲ್ 1ರ ನಂತರ ಪ್ರಕೃತಿ ವಿಕೋಪದಿಂದಾಗಿ ದುರ್ಮರಣ ಹೊಂದಿದ ಸದಸ್ಯನ ಕುಟುಂಬಕ್ಕೆ ಈಗಾಗಲೇ ನಾಲ್ಕು ಲಕ್ಷ ರೂ.ಪರಿಹಾರ ನೀಡಿದ್ದರೂ ಸಹ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಒಂದು ಲಕ್ಷ ರೂ.ಗಳನ್ನು ಈಗ ನೀಡಬೇಕು. ಮತ್ತು ಎಪ್ರಿಲ್ 1ರಿಂದ ಅನ್ವಯವಾಗುವಂತೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ದುರ್ಮರಣ ಹೊಂದಿದರೆ 5 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಆದೇಶಿಸಿದರು.
ಜಿಲ್ಲಾಧಿಕಾರಿಗಳು ತಮ್ಮಲ್ಲಿರುವ ಪಕೃತಿವಿಕೋಪ ನಿಧಿಯ ಖಾತೆಯಲ್ಲಿ ಕನಿಷ್ಠ ಐದು ಕೋಟಿ ರೂ.ಗಳನ್ನು ಹೊಂದಿರಬೇಕು. ಐದು ಕೋಟಿ ರೂ.ಗಳಿಗಿಂತ ಕಡಿಮೆ ಪರಿಹಾರ ನಿಧಿ ಹೊಂದಿರುವ ಜಿಲ್ಲಾಧಿಕಾರಿಗಳ ಖಾತೆಗೆ ಕೂಡಲೆ ಉಳಿದ ಹಣ ಬಿಡುಗಡೆ ಮಾಡಲಾಗುವುದು. ಈ ಕುರಿತು ತಕ್ಷಣ ಮಾಹಿತಿ ನೀಡುವಂತೆ ದೇಶಪಾಂಡೆ ತಿಳಿಸಿದರು.
ಜಿಲ್ಲಾಧಿಕಾರಿಗಳು ವಾರದಲ್ಲಿ ಎರಡು ದಿನ ಸಮಯ ನಿಗದಿಗೊಳಿಸಿ, ಜಿಲ್ಲೆಯ ಎಲ್ಲ ತಾಲೂಕುಗಳ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಬೇಕು. ಈ ಮೂಲಕ ಜಿಲ್ಲೆಯ ಮಳೆ-ಬೆಳೆ ಹಾಗೂ ಇತರ ನಷ್ಟಗಳ ಕುರಿತು ಕರಾರುವಾಕ್ಕಾದ ಮಾಹಿತಿಯನ್ನು ಪಡೆಯಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಕೃಷಿ, ತೋಟಗಾರಿಕೆ, ಪಶುಪಾಲನೆ, ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ವಾರದಲ್ಲಿ ಎರಡರಿಂದ ಮೂರು ದಿನ ಜಿಲ್ಲಾ ಪ್ರವಾಸ ಮಾಡಿ ಮಳೆ ಹಾನಿ, ರೈತರು ಎದುರಿಸುತ್ತಿರುವ ತೊಂದರೆ, ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಿ, ವಾಸ್ತವಿಕ ಪರಿಸ್ಥಿತಿಯನ್ನು ಅರ್ಥ ಮಾಡಿೊಳ್ಳಬೇಕೆಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳು ವಾರದಲ್ಲಿ ಒಂದು ದಿನ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಜಿಲ್ಲೆಯ ಮಾಹಿತಿಯನ್ನು ಕ್ರೋಡೀಕರಿಸಿ, ತಮ್ಮ ಸೂಕ್ತ ಟಿಪ್ಪಣಿ ಹಾಗೂ ಶಿಫಾರಸ್ಸುಗಳೊಂದಿಗೆ ಕಂದಾಯ ಇಲಾಖೆಯ ಪ್ರಕೃತಿವಿಕೋಪ ವಿಭಾಗದ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪ್ರತಿವಾರ ತಪ್ಪದೇ ವರದಿ ಸಲ್ಲಿಸಬೇಕೆಂದು ದೇಶಪಾಂಡೆ ಆದೇಶಿಸಿದರು.
ಪ್ರಕೃತಿವಿಕೋಪ ಪರಿಹಾರ ನಿಧಿಯ ವಿತರಣೆಯಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಜರುಗಿಸಲು ಅನುಕೂಲವಾಗುವಂತೆ, ನಿಯಮಾವಳಿ ಗಳನ್ನು ಸರಳಗೊಳಿಸಲು ಕಂದಾಯ ಇಲಾಖೆಯಿಂದ ಪ್ರಸ್ತಾವನೆ ರೂಪಿಸಿ, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಮತ್ತು ಅಂತಿಮವಾಗಿ ಸಚಿವಸಂಪುಟ ಸಭೆಯ ಅನುಮತಿಯೊಂದಿಗೆ ಹೊಸ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.
ಸಭೆಯಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ, ಕೃಷಿ, ತೋಟಗಾರಿಕೆ, ಪಶುಪಾಲನೆ, ಹೆಸ್ಕಾಂ, ಲೋಕೊಪಯೋಗಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಳೆ-ಬೆಳೆ ಪರಿಸ್ಥಿತಿ, ಬಿತ್ತನೆ ಕಾರ್ಯ, ಕೈಗೊಂಡ ಪುನರ್ವಸತಿ ಹಾಗೂ ಪರಿಹಾರ ಕ್ರಮಗಳ ಕುರಿತು ವರದಿ ಸಲ್ಲಿಸಿದರು.
ಕಂದಾಯ ಇಲಾಖೆಯ ಪ್ರಕೃತಿವಿಕೋಪ ವಿಭಾಗದ ಸರಕಾರದ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಸಂಸದ ಸುರೇಶ್ ಅಂಗಡಿ, ಧಾರವಾಡ ಜಿಲ್ಲೆಯ ಶಾಸಕರಾದ ಸಿ.ಎಂ.ನಿಂಬಣ್ಣವರ, ಸಿ.ಎಸ್.ಶಿವಳ್ಳಿ, ಶಂಕರ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಬೆಳಗಾವಿ ಜಿಲ್ಲೆಯ ಶಾಸಕರಾದ ಅಂಜಲಿ ನಿಂಬಾಳ್ಕರ್, ಲಕ್ಷ್ಮಿ ಹೆಬ್ಬಾಳ್ಕರ್, ಪಿ.ರಾಜೀವ, ಮಹಾಂತೇಶ ಕೌಜಲಗಿ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಶಾಸಕ ದಿನಕರಶೆಟ್ಟಿ ತಮ್ಮ ಕ್ಷೇತ್ರಗಳಲ್ಲಿ ಉಂಟಾಗಿರುವ ಹಾನಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ವಿವರಿಸಿದರು.







