'ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈ ಜೋಡಿಸಿ'
ಬೆಂಗಳೂರು, ಜೂ12: ಮಕ್ಕಳ ಉಜ್ವಲ ಭವಿಷ್ಯ ಕಸಿದುಕೊಳ್ಳುತ್ತಿರುವ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಎಸ್‌ಜೆಪಿಯು ಸಾಮಾಜಿಕ ಕಾರ್ಯಕರ್ತ ಬಸವರಾಜ್ ಕರೆ ನೀಡಿದರು.
ಮಂಗಳವಾರ ನಗರದ ಕೆಂಪೇಗೌಡ ವೃತ್ತದಲ್ಲಿ ಬಾಸ್ಕೋ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದನ್ನು ಕಂಡರೂ ಸಹ ಜನರು ಯಾರೂ ಮಕ್ಕಳ ರಕ್ಷಣೆಗೆ ಮುಂದಾಗದಿದ್ದರೆ, ಬಾಲಕಾರ್ಮಿಕ ಪದ್ಧತಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಹೀಗಾಗಿ, ಬಾಲಕಾರ್ಮಿಕರು ಕಂಡುಬಂದಲ್ಲಿ ಸಹಾಯವಾಣಿಗೆ ದೂರು ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಕ್ಕಳು ತಮ್ಮ ಬಾಲ್ಯವನ್ನು ಶಾಲೆಗಳಲ್ಲಿ ಕಳೆಯುವುದರ ಬದಲು ಹೊಟೇಲ್, ಗ್ಯಾರೇಜ್‌ಗಳಲ್ಲಿ ಕಳೆಯುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿ ವಿರೋಧಿಸಿ ಹಲವಾರು ಕಾನೂನು, ಕಾಯ್ದೆಗಳು ಜಾರಿಯಲ್ಲಿದ್ದರೂ ಮಾಲಕರು ಮಕ್ಕಳನ್ನು ದುಡಿಯಲು ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾಲಕಾರ್ಮಿಕ ಪದ್ಧತಿ ಕಾನೂನಾತ್ಮಕ ಅಪರಾಧ ಎಂದು ಎಲ್ಲರಿಗೂ ತಿಳಿದಿದ್ದರೂ ಸಹ ಇದು ನಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ಸುಮ್ಮನಾಗುತ್ತಾರೆ. ಮಕ್ಕಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಬೋಸ್ಕೋ ಸಂಸ್ಥಾಪಕ ಫಾದರ್ ಮ್ಯಾಥ್ಯೂ ಥಾಮಸ್ ಮತನಾಡಿ, ಬೋಸ್ಕೋ ಸಂಸ್ಥೆ 38 ವರ್ಷಗಳಿಂದ ಮಕ್ಕಳ ಹಕ್ಕು, ರಕ್ಷಣೆ ಮತ್ತು ಪೋಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ 1ಲಕ್ಷದ 55 ಸಾವಿರ ಮಕ್ಕಳನ್ನು ರಕ್ಷಿಸುವುದರ ಜೊತೆಗೆ ಶಿಕ್ಷಣ ನೀಡಿ, ಉದ್ಯೋಗ ಕಲ್ಪಿಸಲಾಗಿದೆ. ಇಂದಿಗೂ ಪ್ರತಿನಿತ್ಯ 15 ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿ ಶಿಕ್ಷಣ ಹಾಗೂ ಇನ್ನಿತರ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.
18 ವರ್ಷದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವ ಮಾಲಕರಿಗೆ 20 ಸಾವಿರದಿಂದ 50 ಸಾವಿರ ರೂ. ದಂಡ ಮತ್ತು 2 ವರ್ಷ ಜೈಲುಶಿಕ್ಷೆ ಎಂಬ ಕಾನೂನು ಜಾರಿಯಲ್ಲಿದ್ದರೂ ಈ ಜಾಲ ಎಗ್ಗಿಲ್ಲದೆ ಬೆಳೆಯುತ್ತಿದೆ. ಹೀಗಾಗಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ನಾವೆಲ್ಲರೂ ಇಂದಿನಿಂದ ಸಂಕಲ್ಪಮಾಡಬೇಕಿದೆ ಎಂದರು.







