ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದುರು ಪ್ರತಿಭಟನೆ ಮುಂದುವರಿಸಿದ ಕೇಜ್ರಿವಾಲ್

ಹೊಸದಿಲ್ಲಿ, ಜೂ. 12: ಅಧಿಕಾರಶಾಹಿಗಳ ಮುಷ್ಕರವನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಆಗ್ರಹಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವೇಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿ ಮುಂದೆ ಪ್ರತಿಭಟನ ಧರಣಿ ಮುಂದುವರಿಸಿದ್ದಾರೆ. ಅಧಿಕಾರಶಾಹಿಗಳು ಮುಷ್ಕರ ಮಾಡಲಿಲ್ಲ. ಆದರೆ, ಮುಖ್ಯಮಂತ್ರಿ ಅವರು ವಿನಾ ಕಾರಣ ಧರಣಿ ನಡೆಸಿದ್ದಾರೆ ಎಂದು ಬೈಜಾಲ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿರುವುದನ್ನು ಕೇಜ್ರಿವಾಲ್ ಮಂಗಳವಾರ ಖಂಡಿಸಿದ್ದಾರೆ.
ದಿಲ್ಲಿ ಸರಕಾರದ ಸುಮಾರು ನಾಲ್ಕು ತಿಂಗಳ ಅಧಿಕಾರಿಗಳು ಕೂಡ ಪಾರ್ಶ್ವಿಕ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಉಂಟಾಗುತ್ತಿದೆ. ಅಧಿಕಾರಿಗಳು ತುಂಬಾ ಮುಖ್ಯವಾದ ಕಡತಗಳನ್ನು ಮಾತ್ರ ಪೂರ್ಣಗೊಳಿಸುತ್ತಿದ್ದಾರೆ. ಸಚಿವರೊಂದಿಗೆ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಫೋನ್ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ‘‘ಫೆಬ್ರವರಿಯಿಂದ ನಾನು ಮತ್ತು ನನ್ನ ಸಂಪುಟ ಸಹೋದ್ಯೋಗಿಗಳು ಅವರನ್ನು ಭೇಟಿಯಾಗುತ್ತಿದ್ದೇವೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಈ ವಿಷಯದ ಕುರಿತು ಹಲವು ಬಾರಿ ಪತ್ರ ಬರೆದಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಭಾರಿಯೂ ಅವರು ಒಂದು ವಾರ ಸಮಯಾವಕಾಶ ಕೋರುತ್ತಾರೆ’’ ಎಂದು ಅವರು ಹೇಳಿದ್ದಾರೆ. ಬೈಜಾಲ್ ಪ್ರತಿಕ್ರಿಯಿಸುವ ವರೆಗೆ ಮುಖ್ಯಮಂತ್ರಿ ಅವರು ಪ್ರತಿಭಟನೆ ಮುಂದುವರಿಸಲಿದ್ದಾರೆ. ಅಧಿಕಾರಶಾಹಿಗಳಿಗೆ ಬೈಜಾಲ್ ಬೆಂಬಲಿಸುತ್ತಿರುವುದನ್ನು ವಿರೋಧಿಸಿ ಗೃಹ ಸಚಿವ ಸತ್ಯೇಂದರ್ ಜೈನ್ ಅನಿರ್ಧಿಷ್ಟಾವದಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ ಎಂದು ಆಪ್‌ನ ಮೂಲಗಳು ತಿಳಿಸಿವೆ.





