ಲಿಂಗಪರಿವರ್ತನೆಯ ಬಳಿಕ ಲಲಿತ್ ಆದ ಕಾನ್‌ಸ್ಟೇಬಲ್ ಲಲಿತಾ

ಮುಂಬೈ, ಜೂ.12: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಪ್ರಥಮ ಹಂತದ ಬಳಿಕ ಚೇತರಿಸಿಕೊಂಡಿರುವ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೊಲೀಸ್ ಕಾನ್‌ಸ್ಟೇಬಲ್ ಲಲಿತಾ ಸಾಳ್ವೆ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ದ್ವಿತೀಯ ಶಸ್ತ್ರಚಿಕಿತ್ಸೆ ಯನ್ನು 6 ತಿಂಗಳ ಬಳಿಕ ನಡೆಸಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇನ್ನು ಮುಂದೆ ಪುರುಷನಾಗಿ ಲಲಿತ್ ಎಂಬ ಹೆಸರಿನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಸಾಳ್ವೆ ತಿಳಿಸಿದ್ದಾರೆ. ಕಳೆದ 29 ವರ್ಷಗಳಿಂದ ಮಹಿಳೆಯಾಗಿ ಜೀವನ ನಡೆಸುತ್ತಿದ್ದ ತಾನು ಇದೀಗ ಈ ಸ್ಥಿತಿಯಿಂದ ಬಿಡುಗಡೆಗೊಂಡಿದ್ದು, ನೂತನ ಬದುಕನ್ನು ಎದುರು ನೋಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ತನ್ನ ದೇಹದಲ್ಲಿ ಬದಲಾವಣೆ ಆಗುತ್ತಿರುವುದನ್ನು ಗಮನಿಸಿರುವುದಾಗಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಲಲಿತಾ ಸಾಳ್ವೆ ತಿಳಿಸಿದ್ದರು. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರ ದೇಹದಲ್ಲಿ ವೈ ಕ್ರೊಮೋಸೋಮ್ ಅಂಶಗಳಿರುವುದು ಪತ್ತೆಯಾಗಿದೆ.
ಪುರುಷರಲ್ಲಿ ಎಕ್ಸ್ ಮತ್ತು ವೈ ಕ್ರೊಮೋಸೋಮ್‌ಗಳಿದ್ದರೆ ಮಹಿಳೆಯರಲ್ಲಿ ಎರಡು ಎಕ್ಸ್ ಕ್ರೊಮೋಸೋಮ್‌ಗಳಿರುತ್ತವೆ. ಲಲಿತಾರಲ್ಲಿ ಲಿಂಗ ವ್ಯತ್ಯಾಸದ ಸಮಸ್ಯೆ ಇರುವ ಕಾರಣ ಅವರು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲಲಿತಾ ಸಾಳ್ವೆ ರಜೆ ಮಂಜೂರುಗೊಳಿಸಬೇಕೆಂದು ಕೋರಿ ರಾಜ್ಯ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಅಗತ್ಯವಿರುವ ಅರ್ಹತಾ ಮಾನದಂಡ ಪುರುಷರಿಗೆ ಮತ್ತು ಮಹಿಳೆಯರಿಗೆ ವಿಭಿನ್ನವಾಗಿದೆ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ಇಲಾಖೆ ತಳ್ಳಿಹಾಕಿತ್ತು.
ಇದನ್ನು ಪ್ರಶ್ನಿಸಿ ಲಲಿತಾ ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಪ್ರಕರಣ ಆಡಳಿತ ಸೇವಾ ವಿಷಯಕ್ಕೆ ಸಂಬಂಧಿಸಿರುವ ಕಾರಣ ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಾಧಿಕರಣವನ್ನು ಸಂಪರ್ಕಿಸುವಂತೆ ಹೈಕೋರ್ಟ್ ತಿಳಿಸಿತ್ತು.
ಅದರಂತೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿ ಹಾಗೂ ರಜೆ ಮಂಜೂರುಗೊಳಿಸಿ ಮೇ 10ರಂದು ರಾಜ್ಯದ ಗೃಹ ಸಚಿವಾಲಯದಿಂದ ಪತ್ರ ಬಂದಿದ್ದು, ಮೇ 25ರಂದು ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದರು.







