ಚಿಕ್ಕಮಗಳೂರು: ಪ್ರಥಮ ಬಾರಿಗೆ ಪಂಜಾಬ್‍ನಿಂದ ಸರಕು ಹೊತ್ತು ಬಂದ ರೈಲು

ಚಿಕ್ಕಮಗಳೂರು, ಜೂ.12: ಪಂಜಾಬ್ ರಾಜ್ಯದಿಂದ ಪಡಿತರದಾರರಿಗೆ ನೀಡುವ ಅಕ್ಕಿಯನ್ನೊತ್ತ ಮೊಟ್ಟ ಮೊದಲ ಸರಕು ಸಾಗಣೆ ರೈಲು ಚಿಕ್ಕಮಗಳೂರು ರೈಲು ನಿಲ್ದಾಣಕ್ಕೆ ಮಂಗಳವಾರ ಬಂದಿರುವ ಹಿನ್ನೆಲೆಯಲ್ಲಿ ನಗರದ ಲಾರಿ ಮಾಲಕರು ಮತ್ತು ಹಮಾಲಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೇಂದ್ರ ಸರಕಾರದಿಂದ ವಿವಿಧ ರಾಜ್ಯಗಳಿಗೆ ನೀಡುವ 1,250 ಟನ್ ಪಡಿತರ ಅಕ್ಕಿಯನ್ನು ಪಂಜಾಬ್ ರಾಜ್ಯದ ಮೊಲಾಯಿಟ್‍ನಿಂದ 21 ವ್ಯಾಗಿನ್‍ಗಳಲ್ಲಿ ನಗರಕ್ಕೆ ರವಾನಿಯಾಗಿದ್ದು, ಈ ಅಕ್ಕಿಯನ್ನು ರೈಲು ನಿಲ್ದಾಣದಿಂದ ಉಗ್ರಾಣ ನಿಗಮದ ಗೋದಾಮಗಳಿಗೆ ರವಾನಿಸುವ ಕಾರ್ಯದಲ್ಲಿ ನಗರದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಲಾರಿಗಳು ತೊಡಗಿಕೊಂಡಿವೆ.
ರೈಲ್ವೇ ನಿಲ್ದಾಣದಿಂದ ಗೌಡನಹಳ್ಳಿಯಲ್ಲಿರುವ ಉಗ್ರಾಣ ನಿಗಮದ ಗೋದಾಮಗಳಿಗೆ ಸಾಗಿಸಲು 10 ಟನ್ ಅಕ್ಕಿ ತುಂಬಿರುವ ಲಾರಿಯೊಂದಕ್ಕೆ 900 ರು.ಗಳ ಬಾಡಿಗೆ ನೀಡಲಾಗುತ್ತಿದ್ದು, ಪ್ರತಿ ಲಾರಿ ಮಾಲೀಕರು ದಿನವೊಂದಕ್ಕೆ 2ರಿಂದ 3 ಟ್ರಿಪ್ ಅಕ್ಕಿ ಸಾಗಿಸಲು ಅವಕಾಶವಾಗುತ್ತಿದ್ದು, ಇದರಿಂದ ಲಾರಿ ಮಾಲೀಕರು ಸಂತಸಗೊಂಡಿದ್ದಾರೆ.
ಮಳೆಗಾಲವಾದ ಕಾರಣ ಸರಕು ಸಾಗಾಣಿಕಾ ವಾಹನಗಳಿಗೆ ಬಾಡಿಗೆಗಳು ದೊರೆಯದೇ ಸಂಕಷ್ಟದಲ್ಲಿದ್ದ ಲಾರಿ ಮಾಲಿಕರು ರೈಲ್ವೇ ವ್ಯಾಗೀನ್‍ಗಳು ಸರಕು ಸಾಮಾಗ್ರಿಗಳನ್ನೊತ್ತು ನಗರಕ್ಕೆ ಆಗಮಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಲಾರಿ ಮಾಲೀಕರಿಗೆ ಬಾಡಿಗೆ ದೊರೆತು ಸಂಕಷ್ಟ ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೆಯೇ ರವಾನೆಯಾಗಿರುವ 1250 ಟನ್ ಅಕ್ಕಿಯನ್ನು ಲಾರಿಗಳಿಗೆ ತುಂಬಿಸುವ ಮತ್ತು ಇಳಿಸುವ ಕಾರ್ಯದಲ್ಲಿ 150ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕಾ ರೈಲುಗಳು ನಗರಕ್ಕೆ ಬರುವ ನಿರೀಕ್ಷೆಯಿದ್ದು, ಹಮಾಲಿ ಕಾರ್ಮಿಕರಿಗೂ ಸಹ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಯಾವುದೇ ರೈಲ್ವೇ ನಿಲ್ದಾಣಕ್ಕೆ ಬರುವ 42 ವ್ಯಾಗೀನ್‍ಗಳ ಸರಕು, ಸರಂಜಾಮುಗಳನ್ನು ರೈಲು ರವಾನೆಯಾದ 7 ಗಂಟೆಗಳೊಳಗೆ ಎಂತಹ ಸಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಖಾಲಿ ಮಾಡಬೇಕಾದ ಸವಾಲು ಗುತ್ತಿಗೆದಾರರ ಮೇಲಿದ್ದು, ಈ ಗಡುವಿನೊಳಗೆ ವ್ಯಾಗೀನ್‍ಗಳಲ್ಲಿರುವ ಸರಕುಗಳನ್ನು ಖಾಲಿ ಮಾಡದಿದ್ದರೆ ಪ್ರತಿ ಗಂಟೆಯೊಂದಕ್ಕೆ ತಲಾ ವ್ಯಾಗೀನೊಂದಕ್ಕೆ ಸಾವಿರಾರು ರೂಪಾಯಿಗಳ ದಂಡ ಭರಿಸಬೇಕಾಗಿರುವ ಕಾರಣಕ್ಕೆ ರೈಲ್ವೇ ವ್ಯಾಗೀನ್‍ಗಳಲ್ಲಿ ಸರಕು ಸರಂಜಾಮುಗಳನ್ನು ರವಾನಿಸುವ ಸಾಹಸಕ್ಕೆ ಕೈಹಾಕುವುದಿಲ್ಲ. ನಗರಕ್ಕೆ ಮೊದಲ ಬಾರಿಗೆ ಬಂದಿರುವ ಅಕ್ಕಿಯನ್ನು ಲೋಡ್ ಅಂಡ್ ಲೋಡ್ ಗುತ್ತಿಗೆದಾರರಾದ ಹಾಸನದ ಪುಟ್ಟಸ್ವಾಮಿ ಎಂಬುವರು ಟೆಂಡರ್ ಪಡೆದಿದ್ದು ನಿಗದಿತ ಅವಧಿಯೊಳಗೆ ರೈಲಿನ ವ್ಯಾಗೀನ್‍ಗಳನ್ನು ಖಾಲಿ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಅಮಾನ್ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆ, ಉದ್ದಿಮೆ, ಕಾರ್ಖಾನೆಗಳಿಲ್ಲದ ಕಾರಣ ಜಿಲ್ಲೆಯ ಲಾರಿ ಮಾಲಿಕರು ತಮ್ಮ ಲಾರಿಗಳಿಗೆ ತೆರಿಗೆ, ಇನ್ಸೂರೆನ್ಸ್ ಕಟ್ಟಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ರೈಲ್ವೇ ವ್ಯಾಗೀನ್‍ಗಳ ಮೂಲಕ ನಗರಕ್ಕೆ ಸರಕುಗಳು ಆಮದಾಗುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದ ಲಾರಿ ಮಾಲೀಕರ ಜೀವನ ಸುಧಾರಿಸಲು ಅವಕಾಶವಾದಂತಾಗಿದೆ ಎಂದರು.







