ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್‌ಗೂ ತಪ್ಪಲಿಲ್ಲ ಪುಂಡರ ಕಾಟ !

ಲಕ್ನೊ, ಜೂ.12: ಉತ್ತರಪ್ರದೇಶದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಸಚಿವೆ ಅನುಪ್ರಿಯಾ ಪಟೇಲ್ ಅವರಿಗೂ ಪುಂಡರು ಕಿರುಕುಳ ನೀಡಿದ ಘಟನೆ ನಡೆದಿದೆ.
ತಾವು ಪ್ರತಿನಿಧಿಸುತ್ತಿರುವ ಮಿರ್ಝಾಪುರ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾರಣಾಸಿಗೆ ಹಿಂತಿರುಗುತ್ತಿದ್ದ ಸಂದರ್ಭ ನಂಬರ್ ಪ್ಲೇಟ್ ರಹಿತ ಕಾರಿನಲ್ಲಿ ಸಾಗುತ್ತಿದ್ದ ಮೂವರು ವ್ಯಕ್ತಿಗಳು ಸಚಿವೆಯ ಬೆಂಗಾವಲು ವಾಹನ ಪಡೆಗಳನ್ನು ಹಿಂದಿಕ್ಕಿ ಮುಂದುವರಿಯಲು ಪ್ರಯತ್ನಿಸಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಆ ಮೂವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಆರೋಪಿಗಳು ಸಚಿವೆ ಅನುಪ್ರಿಯಾ ಪಟೇಲ್ ಬಗ್ಗೆ ಅಶ್ಲೀಲ ಪದ ಪ್ರಯೋಗಿಸಿ ಛೇಡಿಸಿದರಲ್ಲದೆ ಭದ್ರತಾ ಸಿಬ್ಬಂದಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ತಕ್ಷಣ ಸಚಿವೆ ಘಟನೆಯನ್ನು ವಾರಣಾಸಿ ಪೊಲೀಸ್ ಮುಖ್ಯಸ್ಥರ ಗಮನಕ್ಕೆ ತಂದಿದ್ದು ಆರೋಪಿಗಳನ್ನು ಬಂಧಿಸಿ ಅವರು ಸಂಚರಿಸುತ್ತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





