ಬಾಲಕಾರ್ಮಿಕ ಪದ್ಧತಿಗೂ ಬಡತನಕ್ಕೂ ನಿಕಟ ಸಂಬಂಧ: ನ್ಯಾ.ಜಿನರಾಳ್ಕರ್

ತುಮಕೂರು,ಜೂ.12: ಬಡತನಕ್ಕೂ ಬಾಲಕಾರ್ಮಿಕ ಪದ್ಧತಿಗೂ ನಿಕಟ ಸಂಬಂಧವಿದ್ದು, ಬಡತನವನ್ನು ನಿರ್ಮೂಲನೆ ಮಾಡದ ಹೊರತು ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಅಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಬಿ.ಎಲ್. ಜಿನರಾಳ್ಕರ್ ತಿಳಿಸಿದ್ದಾರೆ.
ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಪ್ರತಿಯೊಂದು ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂಬುದು ಸಂವಿಧಾನದ ಆಶಯವಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರ್ಖಾನೆ, ಹೋಟೆಲ್, ಮನೆ, ಮತ್ತಿತರ ಕಡೆ ದುಡಿಸಿಕೊಳ್ಳುವುದನ್ನು ಬಾಲ ಕಾರ್ಮಿಕ ನಿಷೇಧ ಕಾಯ್ದೆ-1986 ಸಂಪೂರ್ಣವಾಗಿ ನಿಷೇಧಿಸಿದೆ. ಆದರೂ ದೇಶದಲ್ಲಿ 1.60ಕೋಟಿ ಬಾಲಕಾರ್ಮಿಕರು ಇದ್ದಾರೆ ಎಂಬುದು ನಿಜಕ್ಕೂ ಕಳವಳಕಾರಿ ಎಂದರು.
ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡದ ಹೊರತು ದೇಶದ ಆರ್ಥಿಕ ಪ್ರಗತಿ ಅಸಾಧ್ಯ. ಇದು ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. 14 ವರ್ಷದೊಳಗಿನ ಮಕ್ಕಳು ತಮ್ಮ ಬಾಲ್ಯವನ್ನು ಚೆನ್ನಾಗಿ ಕಳೆದು, ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯುವಂತೆ ಮಾಡಲು ಸಂವಿಧಾನದ ಪರಿಚ್ಛೇಧ 21ಕ್ಕೆ ತಿದ್ದುಪಡಿ ತಂದು, 21(ಎ)ನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಪ್ರತಿಯೊಂದು ಮಗುವಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದು ಎಲ್ಲಾ ಪೋಷಕರ ಕರ್ತವ್ಯವಾಗಿದೆ ಎಂದು ನ್ಯಾ.ಜೀನರಾಳ್ಕರ್ ತಿಳಿಸಿದರು.
ಸಂವಿಧಾನಕ್ಕೆ ತಿದ್ದುಪಡಿ ತಂದು ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸದ ನಂತರ, ಪ್ರತಿಯೊಬ್ಬರನ್ನು ಶಾಲೆಗೆ ಆಕರ್ಷಿಸಲು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಸೈಕಲ್, ಶೂ ಹಾಗೂ ಕಬ್ಬಿಣಾಂಶದ ಮಾತ್ರೆಗಳನ್ನು ಉಚಿತವಾಗಿ ನೀಡುವ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಆದರೂ ದೇಶದಲ್ಲಿ 1.60 ಕೋಟಿ ಬಾಲ ಕಾರ್ಮಿಕರು ಇದ್ದಾರೆ. ಬಾಲ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಮೂಲ ಆಗಬೇಕಾದರೆ ಮೊದಲಿಗೆ ದೇಶದಲ್ಲಿ ಬಡತನವನ್ನು ತೊಡೆದು ಹಾಕಬೇಕಾಗಿದೆ. ಅಲ್ಲದೆ ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ ಮಾತನಾಡಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಹೋಟೆಲ್, ಮನೆ, ಕಾರ್ಖಾನೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳಬಾರದು ಎಂದ ಅವರು, ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪರಮೇಶಪ್ಪ ಅವರು ಶಾಲಾ ಮಕ್ಕಳಿಗೆ ಬಾಲ ಕಾರ್ಮಿಕರ ನಿಷೇಧ ಕುರಿತ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ., ಬಿಇಓ ರಂಗಧಾಮಪ್ಪ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ಬಾಲಾಜಿ, ಟಮೂಲ್ ಸಂಸ್ಥೆಯ ಉಪ ವ್ಯವಸ್ಥಾಪಕ ರಾಜೇಂದ್ರ ಪ್ರಸಾದ್, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರವಿಕುಮಾರ್,ಕಾರ್ಮಿಕ ನಿರೀಕ್ಷಕಿ ನಾಗರತ್ನಮ್ಮ ಮತ್ತಿತರರು ಹಾಜರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಮಂಜುನಾಥ ವಹಿಸಿದ್ದರು.







