ಮಂಡ್ಯ: ಗಮನ ಸೆಳೆದ ತಾಂತ್ರಿಕ ಯೋಜನಾ ವಸ್ತುಪ್ರದರ್ಶನ; ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಅನಾವರಣ

ಮಂಡ್ಯ, ಜೂ.12: ನಗರದ ಪಿಇಎಸ್ ಇಂಜನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ಮ್ತು ಸಂವಹನ ಇಂಜನಿಯರಿಂಗ್ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ತಾಂತ್ರಿಕ ಯೋಜನಾ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಪ್ರದರ್ಶನ ಉದ್ಘಾಟಿಸಿದ ಪ್ರಾಂಶುಪಾಲ ಡಾ.ವಿ.ಶ್ರೀಧರ್ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷಂತೆ ಈ ಬಾರಿಯೂ ತಾಂತ್ರಿಕ ವಸ್ತುಪ್ರದರ್ಶನವನ್ನು ಏರ್ಪಡಿಸಿದ್ದೇವೆ ಎಂದರು. ತಾಂತ್ರಿಕ ಶಿಕ್ಷಣದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತಯಾರಿಸುವ ಮಾದರಿಗಳನ್ನು ಈ ವಸ್ತುಪ್ರದರ್ಶನದಲ್ಲಿ ಇಡಲಾಗಿದೆ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ವಿಭಾಗದ 25 ಮಾದರಿಗಳು, ಮೆಕಾನಿಕಲ್‍ಗೆ ಸಂಬಂಧಿಸಿದಂತೆ 20 ಮಾದರಿಗಳು ಸೇರಿದಂತೆ 45ಕ್ಕೂ ಹೆಚ್ಚು ಮಾದರಿಗಳು ಪ್ರದರ್ಶನದಲ್ಲಿ ಇಡಲಾಗಿದೆ ಎಂದು ಅವರು ಹೇಳಿದರು.
ಎಲೆಕ್ಟ್ರಿಕಲ್ ಸರ್ಕೀಟ್, ನಾನ್ ಸರ್ಕೀಟ್‍ನಿಂದ ಕೂಡಿದ ಉತ್ತಮ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಪ್ರದರ್ಶನದಲ್ಲಿ ಯಾವುದು ಆವಿಷ್ಕಾರದಿಂದ ಕೂಡಿವೆ ಅಂತಹ ಮಾದರಿಗಳನ್ನು ಮಾತ್ರ ಇಡಲಾಗುತ್ತದೆ. ಪ್ರತಿ ವರ್ಷ ಸುಮಾರು 150ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತದೆ. ಪ್ರತಿಯೊಂದು ವಿಭಾಗದಲ್ಲೂ ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿ ಪ್ರದರ್ಶನ ಮಾಡುತ್ತಾರೆ ಎಂದು ಅವರು ವಿವರಿಸಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್ ವಿಭಾಗಕ್ಕೆ ಸಂಬಂಧಿಸಿದಂತೆ ರೋಬೋಟ್‍ನಿಂದ ಕೂಡಿರುವ ಮಾದರಿಗಳು, ಕೃಷಿಗೆ ಸಂಬಂಧಿಸಿದ ಮಾದರಿಗಳು, ಕಸ ವಿಲೇವಾರಿ ಸಂಬಂಧಿ, ಕಸ ವಿಂಗಡಿಸಿ, ಎಷ್ಟು ಕಸ ತುಂಬಿದೆ, ಎಷ್ಟು ಉಳಿದಿದೆ ಎಂಬುದರ ಕುರಿತಂತೆ ಸಮಗ್ರ ಮಾಹಿತಿ ಇರುವ ಮಾದರಿ, ವಿಲೇವಾರಿ ಮಾಡುವುದು ಹೇಗೆ ಎಂಬಿತ್ಯಾದಿ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ ಎಂದರು.
ಬಯೋ ಇಂಧನ ಉಪಯೋಗಿಸಿ ವಾಹನ ಚಾಲನೆ, ಅದನ್ನು ಕಂಪ್ರೆಸ್ ಮಾಡಿ ಟ್ಯಾಂಕ್‍ನಲ್ಲಿ ಶೇಖರಿಸಿ ಅಡುಗೆ ಮತ್ತು ವಾಹನ ಚಾಲನೆಗೆ ಉಪಯೋಗಿಸುವುದರ ಕುರಿತು, ಸೋಲಾರ್‍ನಿಂದ ಸೈಕಲ್ ಚಾಲನೆ, ವಿದ್ಯುತ್ ಮತ್ತು ಸೋಲಾರ್ ಬಳಸಿ ಸೈಕಲ್ ಚಾಲನೆ ಮಾಡುವುದು ಹೀಗೆ ಹಲವಾರು ಉಪಯೋಗಿ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಇಟ್ಟಿದ್ದಾರೆ ಎಂದು ಅವರು ತಿಳಿಸಿದರು.
ತಾಂತ್ರಿಕ ಪದವಿ ಪೂರ್ಣಗೊಳಿಸಿದ ನಂತರ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಿ ತಮ್ಮದೇ ಆದ ಮಾದರಿಗಳನ್ನು ತಯಾರಿಸಿ ಸಮಾಜಕ್ಕೆ ಬೇಕಾದ ವಸ್ತುಗಳನ್ನು ತಯಾರಿಸಲು ಅನುಕೂಲ ಕಲ್ಪಿಸುವುದು, ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಉಪ ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ, ಡೀನ್ ಡಾ.ಬಿ.ಎಸ್. ಶಿವಕುಮಾರ್, ಡಾ. ಎಂ.ಎನ್. ವೀಣಾ, ಸಂತೋಷ್‍ಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.







